ಬೆಂಗಳೂರು: ನಿವೇಶನವೊಂದರ ಖರೀದಿದಾರರಿಗೆ ಇ–ಖಾತಾ ನೀಡಲು ನೆಲಮಂಗಲ ನಗರಸಭೆಯ ಬಿಲ್ ಕಲೆಕ್ಟರ್ ಯಲ್ಲಪ್ಪ ಪರವಾಗಿ ₹ 15,000 ಲಂಚ ಪಡೆದ ಖಾಸಗಿ ಸಹಾಯಕ ಶಿವಕುಮಾರ್ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮಾದಿಹಳ್ಳಿಯ ನಿವಾಸಿಯೊಬ್ಬರು ನೆಲಮಂಗಲ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸಿದ್ದರು. ಆಸ್ತಿ ನೋಂದಣಿ ಬಳಿಕ ಇ–ಖಾತಾ ನೀಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಿದ್ದರು.
ಇ–ಖಾತಾ ನೀಡಲು ₹ 20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಯಲ್ಲಪ್ಪ, ₹ 5,000 ಮುಂಗಡವಾಗಿ ಪಡೆದಿದ್ದರು. ಉಳಿದ ಮೊತ್ತವನ್ನು ಶಿವಕುಮಾರ್ ಬಳಿ ನೀಡುವಂತೆ ಸೂಚಿಸಿದ್ದರು. ಈ ಬಗ್ಗೆ ಆಸ್ತಿ ಮಾಲೀಕರು ಎಸಿಬಿಗೆ ದೂರು ನೀಡಿದ್ದರು. ಬುಧವಾರ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಖಾಸಗಿ ವ್ಯಕ್ತಿಯನ್ನು ಬಂಧಿಸಿದರು. ಬಿಲ್ ಕಲೆಕ್ಟರ್ ತಲೆಮರೆಸಿಕೊಂಡಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.