ADVERTISEMENT

ಲಂಚ ಪ್ರಕರಣ: ಆಹಾರ ಇಲಾಖೆ ಡಿ.ಡಿ, ಮಧ್ಯವರ್ತಿ ನ್ಯಾಯಾಂಗ ಬಂಧನಕ್ಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
<div class="paragraphs"><p>ಲಂಚ</p></div>

ಲಂಚ

   

ಬೆಂಗಳೂರು: ಲಂಚ ಪ್ರಕರಣದಲ್ಲಿ ಬಂಧಿತರಾಗಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಬೆಂಗಳೂರು ನಗರ ಜಿಲ್ಲೆಯ ಉಪ ನಿರ್ದೇಶಕಿ ಪ್ರೀತಿ ಚಂದ್ರಶೇಖರ್‌ ಮತ್ತು ಖಾಸಗಿ ಮಧ್ಯವರ್ತಿ ರಮೇಶ್‌ ಅವರನ್ನು ಜೂನ್‌ 28 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನ್ಯಾಯಬೆಲೆ ಅಂಗಡಿಯೊಂದರ ಪರವಾನಗಿ ಅಮಾನತುಗೊಳಿಸಿ ಹೊರಡಿಸಿದ್ದ ಆದೇಶ ಹಿಂಪಡೆಯಲು ₹ 70,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಉಪ ನಿರ್ದೇಶಕಿ, ₹ 50,000 ಮುಂಗಡ ಪಡೆದಿದ್ದರು. ಆದೇಶ ಹಿಂಪಡೆಯುವ ಮುನ್ನ ಬಾಕಿ ₹ 20,000 ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ತುಂಗಾನಗರ ನಿವಾಸಿ ಪುರುಷೋತ್ತಮ ಎಂಬುವವರು ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕ–1ಕ್ಕೆ ದೂರು ಸಲ್ಲಿಸಿದ್ದರು.

ADVERTISEMENT

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯಲ್ಲಿದ್ದ ಪ್ರೀತಿ ಚಂದ್ರಶೇಖರ್‌, ಕೆಂಪೇಗೌಡ ನಗರದ ನ್ಯಾಯಬೆಲೆ ಅಂಗಡಿಯೊಂದರ ಬಳಿ ಹೋಗಿ ರಮೇಶ್‌ ಎಂಬ ಮಧ್ಯವರ್ತಿಗೆ ಹಣ ತಲುಪಿಸುವಂತೆ ಸೂಚಿಸಿದ್ದರು. ಅದರಂತೆ ದೂರುದಾರರು ರಮೇಶ್‌ ಭೇಟಿಮಾಡಿ ಹಣ ನೀಡಿದ್ದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ‍ಪೊಲೀಸರು ಮಧ್ಯವರ್ತಿಯನ್ನು ಬಂಧಿಸಿದ್ದರು. ನಂತರ ಕೆಂಪೇಗೌಡ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಬಂದು, ಅಲ್ಲಿ ಸಭೆ ಮುಗಿಸಿ ಹೊರಬಂದ ಉಪ ನಿರ್ದೇಶಕಿಯನ್ನು ಬಂಧಿಸಿದ್ದರು.

ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿ, ಶನಿವಾರ ಸಂಜೆ ಇಬ್ಬರೂ ಆರೋಪಿಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರೀತಿ ಚಂದ್ರಶೇಖರ್‌ ಮತ್ತು ರಮೇಶ್‌ ಅವರನ್ನು ಜೂನ್‌ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. ಇಬ್ಬರೂ ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ನೀಡಲಾಗಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.