ADVERTISEMENT

ಬೆಂಗಳೂರು | ಲಂಚ ಪಡೆಯುತ್ತಿದ್ದ ಕಾರ್ಮಿಕ ಅಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 22:30 IST
Last Updated 10 ಜುಲೈ 2024, 22:30 IST
ಶಮ್ಮಿ
ಶಮ್ಮಿ   

ಬೆಂಗಳೂರು: ಕಂಪನಿಯೊಂದಕ್ಕೆ ನೀಡಿದ್ದ ನೋಟಿಸ್‌ ಅನ್ನು ಮುಕ್ತಾಯಗೊಳಿಸಲು ₹ 5000 ಲಂಚ ಪಡೆಯುತ್ತಿದ್ದ ಕಾರ್ಮಿಕ ಇಲಾಖೆಯ ಬಾಗಲಗುಂಟೆ ವೃತ್ತ ಕಚೇರಿಯ ಹಿರಿಯ ಕಾರ್ಮಿಕ ಅಧಿಕಾರಿ ಶಮ್ಮಿ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ನಗರದ ಟಿ.ದಾಸರಹಳ್ಳಿಯಲ್ಲಿರುವ ಅದಿತ್ ಪೆಸಿಲಿಟೀಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಎಂಬ ಭದ್ರತಾ ಏಜೆನ್ಸಿಯ ವಿರುದ್ಧ, ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪದಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು. ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಸ್ಥೆಯು ಇಲಾಖೆಗೆ ಸಲ್ಲಿಸಿತ್ತು. ಆದರೆ ನೋಟಿಸ್ ಅನ್ನು ಮುಕ್ತಾಯಗೊಳಿಸಲು ₹5,000 ಲಂಚ ನೀಡುವಂತೆ ಅಧಿಕಾರಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕಂಪನಿಯ ಮೇಲ್ವಿಚಾರಕ ಭಾನುಪ್ರಕಾಶ್ ಅವರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ಘಟಕ–2ಕ್ಕೆ ದೂರು ನೀಡಿದ್ದರು.

ಬಾಗಲಗುಂಟೆಯಲ್ಲಿರುವ ಕಾರ್ಮಿಕ ವೃತ್ತ ಕಚೇರಿ–45ರಲ್ಲಿ ಲಂಚದ ಹಣ ತಲುಪಿಸುವಂತೆ ಆರೋಪಿ ಸೂಚಿಸಿದ್ದರು. ಅದರಂತೆ ಬುಧವಾರ ಸಂಜೆ 4ರ ವೇಳೆ ಕಚೇರಿಗೆ ಹೋದ ಭಾನುಪ್ರಕಾಶ್‌ ಲಂಚದ ಹಣ ತಲುಪಿಸಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸ್‌ ವಿಭಾಗದ ಇನ್ಸ್‌ಪೆಕ್ಟರ್‌ ದದಾವಲಿ ನೇತೃತ್ವದ ತಂಡ ಶಮ್ಮಿ ಅವರನ್ನು ಬಂಧಿಸಿದೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ADVERTISEMENT

ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕ–2ರ ಎಸ್‌ಪಿ ಕೋನ ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.