ಬೆಂಗಳೂರು: ‘ನಗರದ ಹೋಟೆಲ್‌ಗಳಿಗೆ ಪ್ರತಿನಿತ್ಯ ಸುಮಾರು 6 ಲಕ್ಷ ಲೀಟರ್ ಹಾಲು ಮತ್ತು ಅದರ ಉತ್ಪನ್ನಗಳ ಬೇಡಿಕೆ ಇದೆ. ಆದರೆ, ಕಳೆದ ಎರಡು ವಾರಗಳಿಂದ ಶೇ 20ರಷ್ಟು ಹಾಲಿನ ಕೊರತೆಯಾಗುತ್ತಿದೆ’ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದರು.
ಈ ಕುರಿತ ಕರ್ನಾಟಕ ಹಾಲು ಉತ್ಪಾದಕರ ಸಂಘದ(ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು ‘ಹೊರ ರಾಜ್ಯಗಳಿಗೆ ನಂದಿನಿ ಹಾಲು ಸರಬರಾಜು ಮಾಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು’ ಎಂದಿದ್ದಾರೆ.
‘ಹಾಲಿನ ಬೇಡಿಕೆ ಅಧಿಕವಾಗಿರುವುದರಿಂದ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕು. ಇತ್ತೀಚೆಗೆ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳ ಕೊರತೆ ಅಧಿಕವಾಗಿದೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನೇ ಹೆಚ್ಚು ಬಳಸುವುದರಿಂದ ಈ ಬೇಡಿಕೆ ಇರುವಷ್ಟು ಪೂರೈಕೆಯಾಗುತ್ತಿಲ್ಲ. ಇದರಿಂದ ಮಾಲೀಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ವಿವರಿಸಿದ್ದಾರೆ.
‘ಹೋಟೆಲ್ ಉದ್ಯಮದಲ್ಲಿ ನಂದಿನಿಯನ್ನೇ ನಂಬಿಕೊಂಡಿರುವವರು ಶೇ 90ಕ್ಕಿಂತ ಹೆಚ್ಚಿದ್ದಾರೆ. ನಂದಿನ ಹಾಲು ಗುಣಮಟ್ಟದಿಂದ ಕೂಡಿದ್ದು, ಹಾಲಿನ ಕೊರತೆಯಿಂದ ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಖಾಸಗಿ ಕಂಪನಿಗಳ ಹಾಲಿಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು. ಕೆಎಂಎಫ್ ತಮಿಳುನಾಡು, ಆಂಧ್ರಪ್ರದೇಶ, ಸೇರಿ ಬೇರೆ ರಾಜ್ಯಗಳಲ್ಲಿ ನಂದಿನಿ ಹಾಲಿನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡ ಪರಿಣಾಮ ಸ್ಥಳೀಯವಾಗಿ ಈ ಅಭಾವ ಸೃಷ್ಟಿಯಾಗಿದೆ’ ಎಂದು ಪಿ.ಸಿ. ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.