ಬೆಂಗಳೂರು: ‘ರಾಜ್ಯದ ಆರ್ಥಿಕತೆಯ ಶಕ್ತಿಯಾಗಿರುವ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಎಲ್ಲ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲಾಗುವುದು. ಜೊತೆಗೆ, ಜಾಗತಿಕ ‘ಬಿಟಿ ಹಬ್’ ಆಗಿ ರಾಜ್ಯ ಹೊರಹೊಮ್ಮುವುದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಬುಧವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ಆರ್ಥಿಕತೆ, ಉದ್ಯೋಗ ಸೃಷ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳೆರಡೂ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಹೀಗಾಗಿ, ಈ ಎರಡೂ ಕ್ಷೇತ್ರಗಳಿಗೆ ಸರ್ಕಾರ ಮಹತ್ವ ನೀಡಲಿದೆ’ ಎಂದರು.
‘ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಈಗಾಗಲೇ ಕೈಗಾರಿಕೆ ಪೂರಕವಾದ ವಾತಾವರಣ ಸೃಷ್ಟಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ವಾಣಿಜ್ಯ, ಕೈಗಾರಿಕೆ ಕ್ಷೇತ್ರಗಳಿಗೆ ಹೆಚ್ಚು ಮನ್ನಣೆ ನೀಡಲಾಗುವುದು’ ಎಂದು ಅವರು ಹೇಳಿದರು.
‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ ರಾಜ್ಯದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪರಿಧಿಯನ್ನು ಮತ್ತಷ್ಟು ವಿಸ್ತಾರಗೊಳಿಸಲಿದೆ. ದೇಶದ ಬಿಟಿ ರಾಜಧಾನಿ ಆಗಿರುವ ಬೆಂಗಳೂರು ನಗರಕ್ಕೆ ಈ ಪಾರ್ಕ್ ಅನನ್ಯ ಕೊಡುಗೆ ನೀಡುವ ವಿಶ್ವಾಸ ನನಗಿದೆ. ಈ ಯೋಜನೆಗೆ ಸರ್ಕಾರ ₹ 150 ಕೋಟಿ ಅನುದಾನ ನೀಡಿದೆ. 150ಕ್ಕೂ ಹೆಚ್ಚು ಕಂಪನಿಗಳು ಈ ಪಾರ್ಕ್‌ನಲ್ಲಿ ನೆಲೆಗೊಳ್ಳಲಿವೆ. 100ಕ್ಕೂ ಹೆಚ್ಚು ನವೋದ್ಯಮಗಳು ಸ್ಥಾಪನೆಯಾಗಲಿವೆ. ಇದರಿಂದ 50,000ಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಕೆಲಸ ಸಿಗಲಿದೆ’ ಎಂದು ಮುಖ್ಯಮಂತ್ರಿ ಹೇಳಿದರು.
‘ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ದೊಡ್ಡ ಸಾಧನೆಯನ್ನೇ ಮಾಡಿದೆ. ಸದ್ಯಕ್ಕೆ ರಾಜ್ಯದಲ್ಲಿ 380 ಕಂಪನಿಗಳು, 200ಕ್ಕೂ ಹೆಚ್ಚು ನವೋದ್ಯಮಗಳು ಇದರಲ್ಲಿ ತೊಡಗಿಕೊಂಡಿವೆ. ಏಷ್ಯಾದಲ್ಲಿ ಶೇ 9ರಷ್ಟು, ಭಾರತದಲ್ಲಿ ಶೇ 35ರಷ್ಟು ಮಾರುಕಟ್ಟೆ ಪಾಲು ನಾವು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಗಣನೀಯವಾಗಿ ಹೆಚ್ಚಾಗಬೇಕು. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ’ ಎಂದು ಅವರು ಪ್ರಕಟಿಸಿದರು.
ಎರಡು ದಶಕಗಳ ಕನಸು:ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಸಾಕಾರವಾಗುವ ಸಮಯ ಬಂದಿದೆ. ಈಗಾಗಲೇ ಪ್ರಬಲವಾಗಿ ಹೊರಹೊಮ್ಮಿರುವ ರಾಜ್ಯ ಬಿಟಿ ಕ್ಷೇತ್ರಕ್ಕೆ ಈ ಪಾರ್ಕ್ ಮೂಲಕ ಮತ್ತಷ್ಟು ಬಲ ಬರಲಿದೆ’ ಎಂದರು.
‘ಸರ್ಕಾರದ ಇಚ್ಚಾಶಕ್ತಿಯಿಂದ ಇದು ಸಾಧ್ಯವಾಗುತ್ತಿದೆ. ಸಂಶೋಧನೆ, ಅಭಿವೃದ್ಧಿ ಎಲ್ಲವೂ ಒಂದೇ ಸೂರಿನ ಅಡಿಯಲ್ಲಿ ಆಗಲಿದೆ. ಈ ಯೋಜನೆ ಸಾಕಾರಗೊಂಡ ಮೇಲೆ ಜಾಗತಿಕ ಭೂಪಟದಲ್ಲಿ ಬೆಂಗಳೂರಿನ ಪ್ರತಿಷ್ಠೆ ಮತ್ತಷ್ಟು ಹೆಚ್ಚಲಿದೆ’ ಎಂದು ಅಭಿಪ್ರಾಯಪಟ್ಟರು.
‘ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಈ ಕ್ಷೇತ್ರವಿಲ್ಲದೆ ಈಗ ಮನುಕುಲವನ್ನು ಊಹಿಸಿಕೊಳ್ಳುವುದೇ ಕಷ್ಟ. ಕೃಷಿ, ಕೈಗಾರಿಕೆ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಇದರ ಪ್ರಭಾವ ಇದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಸರ್ಕಾರ ಅನೇಕ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿದೆ. ಉದ್ಯಮಸ್ನೇಹಿಯಾದ ಹಲವು ಕ್ರಮಗಳನ್ನು ದಿಟ್ಟತನದಿಂದ ಕೈಗೊಂಡಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ಕಾನೂನುಗಳನ್ನು ಸರಳಗೊಳಿಸಿ ಹೂಡಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲಾಗಿದೆ’ ಎಂದು ಹೇಳಿದರು.
‘ಸಂಶೋಧನೆ ಮತ್ತು ಹೊಸ ಅವಿಷ್ಕಾರಗಳಿಗಿದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ. ’‘ಕರ್ನಾಟಕ ಇನೋವೆಷನ್ ಅಥಾರಿಟಿ’ಯನ್ನು ಸ್ಥಾಪಿಸಲಾಗಿದೆ. ‘ಇನ್‌ವೆಸ್ಟ್ ಕರ್ನಾಟಕ ಮೂಲಕ ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ದೇಶದ ಯಾವುದೇ ರಾಜ್ಯವೂ ಕೈಕೊಳ್ಳದಂಥ ಪರಿಣಾಮಕಾರಿ ಕ್ರಮಗಳನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ಕೈಗೊಂಡಿದೆ’ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್, ಶಾಸಕ ಎಂ. ಕೃಷ್ಣಪ್ಪ ಇದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್ ಸಿಇಒ ಚಿರಾಗ್ ಪುರುಷೋತ್ತಮ್ ಯೋಜನೆಯ ಮಾಹಿತಿ ನೀಡಿದರು. ಕರ್ನಾಟಕ ಕೈಗಾರಿಕಾ ತಾಂತ್ರಿಕ ಸಂಸ್ಥೆಯ ನಿರ್ದೇಶಕಿ ಮೀನಾ ನಾಗರಾಜ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.