ಬೆಂಗಳೂರು: ಬಿಎಸ್ಸಿ ಕೃಷಿ ಮತ್ತು ಪಶು ವೈದ್ಯಕೀಯ ಕೋರ್ಸುಗಳಿಗೆ ಹೊಸದಾಗಿ 120ಕ್ಕೂ ಹೆಚ್ಚು ಸೀಟು ಲಭ್ಯವಿರುವುದರಿಂದ, ಆಸಕ್ತ ಅರ್ಹ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ದಾಖಲಿಸಲು ನ.12ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಬಿಎಸ್ಸಿ ಅಗ್ರಿಕಲ್ಚರ್ ಗೆ ಹೊಸದಾಗಿ 72 ಸೀಟುಗಳು ಹಾಗೂ ವೆಟರಿನರಿ ಕೋರ್ಸ್ ಗೆ ಸುಮಾರು 50 ಸೀಟುಗಳು ಲಭ್ಯ ಇವೆ. ಅಲ್ಲದೆ ಹಂಚಿಕೆಯಾಗದೆ ಉಳಿದ ಸೀಟುಗಳೂ ಇದ್ದು ಅವುಗಳನ್ನೂ ಸೇರಿಸಿ ಹಂಚಿಕೆ ಮಾಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಎಸ್.ಕರಿಯಪ್ಪ ಕೃಷಿ ಕಾಲೇಜು ಹಾಗೂ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಆದಿಚುಂಚನಗಿರಿ ಕೃಷಿ ಕಾಲೇಜು ಹಾಗೂ ಬೆಳಗಾವಿಯ ಅಥಣಿಯಲ್ಲಿ ಬಾಬುರಾವ್ ದೇಶಪಾಂಡೆ ಪಶು ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರ ತೀರ್ಮಾನಿಸಿ, ಸೀಟ್ ಮ್ಯಾಟ್ರಿಕ್ಸ್ ಕೊಟ್ಟಿದೆ. ಆ ಪ್ರಕಾರ ಸೀಟು ಹಂಚಿಕೆ ಮಾಡಲಾಗುವುದು ಎಂದು ಅವರು ವಿವರಿಸಿದರು.
ಪ್ರಾಧಿಕಾರದಿಂದ ಯಾವುದೇ ಕೋರ್ಸಿಗೆ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಮಾತ್ರ ಈ ಸುತ್ತಿನಲ್ಲಿ
ಭಾಗವಹಿಸಬಹುದು. ಕಾಲೇಜುವಾರು, ಕೋರ್ಸುವಾರು ಮತ್ತು ಪ್ರವರ್ಗವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಾಧಿಕಾರದ ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದರು.
ಆಪ್ಷನ್ ಎಂಟ್ರಿ ಮಾಡಲು ನ. 8ರ ಸಂಜೆ 6ರಿಂದ ನ.12ರ ಬೆಳಿಗ್ಗೆ 11 ರವರೆಗೆ ಅವಕಾಶವಿರುತ್ತದೆ. ವೆರಿಫಿಕೇಶನ್ ಸ್ಲಿಪ್ ಅನ್ನು ನ.11ರ ಸಂಜೆ 4ಕ್ಕೆ ಡೌನ್ಲೋಡ್ ಮಾಡಿಕೊಳ್ಳ ಬಹುದು. ನ.12ರ ಸಂಜೆ 5ಕ್ಕೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ಆಗುತ್ತದೆ. ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ನ.13 ಮತ್ತು 14ರಂದು ಅವಕಾಶವಿರುತ್ತದೆ. ಅಭ್ಯರ್ಥಿಗಳು ನ.14ರಂದು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು. ಎಂದು ವಿವರಿಸಲಾಗಿದೆ.
ನರ್ಸಿಂಗ್ ಕೋರ್ಸ್ ಗೆ ಆಪ್ಷನ್ಸ್ ದಾಖಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಯುಜಿ ಆಯುಷ್ ಕೋರ್ಸ್ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಹೊಸದಾಗಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ವಿವರಗಳಿಗೆ ವೆಬ್ ಸೈಟ್ ನೋಡಬಹುದು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.