ಬೆಂಗಳೂರು: ಹೆಣ್ಣೂರು ಬಳಿಯ ಥಣಿಸಂದ್ರದಲ್ಲಿ ಬಿಎಸ್ಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಯ್ಯಪ್ಪ (20) ಆತ್ಮಹತ್ಯೆ ಮಾಡಿಕೊಂಡವರು.
‘ತಮಿಳುನಾಡು ಮೂಲದ ಅಯ್ಯಪ್ಪ ಅವರು ತಾಯಿ ಜತೆಗೆ ಬೆಂಗಳೂರಿಗೆ ಬಂದು ಥಣಿಸಂದ್ರದಲ್ಲಿ ನೆಲೆಸಿದ್ದರು. ಆರು ವರ್ಷದ ಹಿಂದೆ ಅಯ್ಯಪ್ಪ ಅವರ ತಂದೆ ಮೃತಪಟ್ಟಿದ್ದರು. ತಾಯಿ, ಮನೆ ಕೆಲಸ ಮಾಡಿಕೊಂಡು ಮಗನನ್ನು ಓದಿಸುತ್ತಿದ್ದರು. ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಯ್ಯಪ್ಪಗೆ ಬೈಕ್‌ನಲ್ಲಿ ಓಡಾಡುವ ವ್ಯಾಮೋಹ ಹೆಚ್ಚಾಗಿತ್ತು. ಬೈಕ್ ಕೊಡಿಸುವಂತೆ ಅಮ್ಮನ ಬಳಿ ಕೇಳುತ್ತಿದ್ದರು. ಆರ್ಥಿಕ ತೊಂದರೆಯಿಂದ ಪುತ್ರನಿಗೆ ಬೈಕ್ ಕೊಡಿಸಲು ತಾಯಿಗೆ ಸಾಧ್ಯವಾಗಿರಲಿಲ್ಲ. ಸ್ವಲ್ಪ ದಿನ ತಾಳ್ಮೆ ವಹಿಸುವಂತೆ ಸಮಾಧಾನ ಮಾಡಿ, ಬೈಕ್ ಕೊಡಿಸಲು ತಾಯಿ ಹಣ ಹೊಂದಿಸುವ ಪ್ರಯತ್ನ ಮಾಡುತ್ತಿದ್ದರು. ಅದು ಪುತ್ರನಿಗೆ ಸಮಾಧಾನ ತಂದಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.
ಬುಧವಾರ ಅಯ್ಯಪ್ಪ ಅವರ ತಾಯಿ ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ತೆರಳಿದ್ದರು. ಸಂಜೆ 4.30ರ ಸುಮಾರಿಗೆ ಮನೆಗೆ ವಾಪಸ್ಸಾದಾಗ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ಇದರಿಂದ ಗಾಬರಿಗೊಂಡ ತಾಯಿ ಸಂಬಂಧಿಕರು ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಸಂಬಂಧಿಕರು ನೀಡಿದ ಮಾಹಿತಿ ಆಧರಿಸಿ ಹೆಣ್ಣೂರು ಪೊಲೀರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ತಾಯಿ ಬೈಕ್ ಕೊಡಿಸಲು ಮುಂದಾಗಿದ್ದ ವಿಷಯ ಅಯ್ಯಪ್ಪ ಅವರ ಗಮನಕ್ಕೆ ಬಂದಿರಲಿಲ್ಲ. ಬೈಕ್ ಕೊಡಿಸಲಿಲ್ಲ ಎಂದು ನೊಂದು ಆತ್ಮಹತ್ಯೆ ಮಡಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.