ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಪ್ರವೇಶ ದ್ವಾರದಲ್ಲಿ ಸೋಮವಾರ ನವೀಕೃತ ಸರಸ್ವತಿಯ ವಿಗ್ರಹವನ್ನು ಪ್ರತಿಷ್ಠಾಪಿಸ ಲಾಗಿದ್ದು, ಯಾವುದೇ ವಿವಾದ ಉಂಟಾಗಿಲ್ಲ.
ವಿವಾದ ಎದುರಾಗಬಹುದು ಎಂಬ ಕಾರಣಕ್ಕೆ ಭದ್ರತೆ ಒದಗಿಸಲಾಗಿತ್ತು. ಆದರೆ ಎಲ್ಲವೂ ಶಾಂತಿಯುತವಾಗಿ ನಡೆಯಿತು. ಭದ್ರತೆಗೆ ಬಂದಿದ್ದ ಪೊಲೀಸರು ಸಹ ವಿಗ್ರಹದ ಫೋಟೊ ಕ್ಲಿಕ್ಕಿಸಿ ಖುಷಿಪಟ್ಟರು.
‘ಸರ್ಕಾರಗಳ ಬದಲಾವಣೆ, ಆಷಾಢ ಮಾಸ ಸಹಿತ ಹಲವು ಕಾರಣಗಳಿಂದಾಗಿ ವಿಗ್ರಹ ಮರುಸ್ಥಾಪನೆ ವಿಳಂಬವಾಯಿತು. ಇಲ್ಲಿ ಸರಸ್ವತಿ ಬಿಟ್ಟರೆ ಬೇರೆ ಯಾವ ವಿಗ್ರಹ ಸ್ಥಾಪನೆಗೂ ಅವಕಾಶ ಇಲ್ಲ. ಈಗ ಯಾವ ವಿವಾದವೂ ಇಲ್ಲ’ ಎಂದು ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಿಂಡಿಕೇಟ್ ಸಭೆಯಲ್ಲಿ ವಿಗ್ರಹದ ವೆಚ್ಚದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ನನ್ನ ಸ್ವಂತ ದುಡ್ಡಲ್ಲೇ ಸುಮಾರು ₹ 7 ಲಕ್ಷ ವೆಚ್ಚದಲ್ಲಿ ನವೀಕೃತ ವಿಗ್ರಹ ಪ್ರತಿಷ್ಠಾಪಿಸಿದ್ದೇನೆ’ ಎಂದು ಅವರು ಹೇಳಿದರು.
ವಿವಾದ: ಈ ಮೊದಲಿದ್ದ ಸರಸ್ವತಿ ವಿಗ್ರಹದ ಕೈಯೊಂದು ತುಂಡಾದ ಕಾರಣ ಆ ವಿಗ್ರಹವನ್ನು ಬದಲಿಸಿ, ಹೊಸ ವಿಗ್ರಹ ಸ್ಥಾಪನೆಗೆ ಸಿದ್ಧತೆ ನಡೆದಿತ್ತು. ಒಮ್ಮಿಂದೊಮ್ಮೆಲೆ ಅದೇ ಸ್ಥಳದಲ್ಲಿ ಕೆಲವು ವ್ಯಕ್ತಿಗಳುಬುದ್ಧನ ವಿಗ್ರಹವನ್ನು ತಂದು ಕೂರಿಸಿದ್ದರಿಂದ ಭಾರಿ ವಿವಾದ ಉಂಟಾಗಿತ್ತು. ಗದ್ದಲ ಎದ್ದ ಕಾರಣ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿತ್ತು.
ಬಳಿಕ ಉನ್ನತ ಶಿಕ್ಷಣ ಮಂಡಳಿಯಲ್ಲಿ ಈ ವಿಷಯದ ಚರ್ಚೆ ನಡೆದು, ಸರಸ್ವತಿಯ ವಿಗ್ರಹ ಬಿಟ್ಟು ಬೇರೆ ಯಾವ ವಿಗ್ರಹವನ್ನೂ ಸ್ಥಾಪಿಸುವುದು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿತ್ತು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.