ADVERTISEMENT

ಬಫರ್ ವಲಯ ಮಾಹಿತಿ ಸಲ್ಲಿಕೆಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 19:09 IST
Last Updated 19 ಆಗಸ್ಟ್ 2019, 19:09 IST

ಬೆಂಗಳೂರು: ‘ತಿಪ್ಪಗೊಂಡನಹಳ್ಳಿ ಜಲಾಶಯ, ಆರ್ಕಾವತಿ ಮತ್ತು ಕುಮುದ್ವತಿ ನದಿಗಳ ಜಲಾನಯನ ಪ್ರದೇಶಗಳಿಗೆ ಬಫರ್ ವಲಯ ನಿಗದಿಪಡಿಸಿರುವ ಆದೇಶ ಪೂರ್ವಾನ್ವಯವಾಗುತ್ತದೆಯೇ ಇಲ್ಲವೇ ಎಂಬುದನ್ನು ತಿಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆ ಟಿ.ರಾಜ್‌ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ‘ಬಫರ್ ವಲಯ ಪ್ರದೇಶದಲ್ಲಿ ಬರುವ ಕೈಗಾರಿಕಾ ಕಟ್ಟಡಗಳು ಯಾರ ವ್ಯಾಪ್ತಿಗೆ ಒಳಪಡುತ್ತವೆ ಎಂಬ ಬಗ್ಗೆ ಸರ್ವೇ ನಡೆಸಿ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಿ’ ಎಂದು ತಾಕೀತು ಮಾಡಿದೆ.

ADVERTISEMENT

ಬಫರ್ ವಲಯವನ್ನು ಮರು ನಿಗದಿ ಮಾಡಿ ರಾಜ್ಯ ಸರ್ಕಾರ 2019ರ ಜುಲೈ 28ರಂದು ಆದೇಶ ಹೊರಡಿಸಿದೆ. ಈ ಆದೇಶ ಪೂರ್ವಾನ್ವವಾಗುತ್ತದೆಯೇ ಇಲ್ಲವೋ ಎಂಬ ಬಗ್ಗೆ ಸರ್ಕಾರ ಈಗ ತನ್ನ ನಿಲುವು ತಿಳಿಸಬೇಕಿದೆ.

ಕೋರಿಕೆ ಏನು?: ‘ರಾಜ್ಯ ಸರ್ಕಾರ 2003ರಲ್ಲಿ ಹೊರಡಿಸಿದ್ದ ಆದೇಶದ ನಂತರ ಬಫರ್ ವಲಯ ಮರುನಿಗದಿ ಮಾಡಿದೆ. ಇದರಿಂದಾಗಿ ಹೊಸದಾಗಿ ಸರ್ವೇ ನಡೆಸಿ ಯಾವ ಕಟ್ಟಡಗಳು ನಿಯಮ ಉಲ್ಲಂಘಿಸಿವೆ, ಯಾವ ಉಲ್ಲಂಘಿಸಿಲ್ಲ ಎಂಬುದರ ಸರ್ವೇ ನಡೆಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.