ADVERTISEMENT

ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ಸಂಪರ್ಕ ನಿರ್ಮಿಸಿ: ಬಿಬಿಎಂಪಿ ಆಡಳಿತಾಧಿಕಾರಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 15:42 IST
Last Updated 7 ನವೆಂಬರ್ 2024, 15:42 IST
ಹೆಬ್ಬಾಳ ಜಂಕ್ಷನ್‌ನಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌. ಉಮಾಶಂಕರ್‌ ಮಾಹಿತಿ ಪಡೆದರು
ಹೆಬ್ಬಾಳ ಜಂಕ್ಷನ್‌ನಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌. ಉಮಾಶಂಕರ್‌ ಮಾಹಿತಿ ಪಡೆದರು   

ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಲ್ಲಿ ಸಮಗ್ರ ಬಹುಮಾದರಿ ಸಾರಿಗೆ ಸಂಪರ್ಕ ಅಭಿವೃದ್ಧಿಪಡಿಸಲು ಯೋಜನೆ ರೂಪಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌. ಉಮಾಶಂಕರ್‌ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಸಮನ್ವಯಕ್ಕೆ ಸಂಬಂಧಿಸಿದಂತೆ ಗುರುವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಜಂಕ್ಷನ್‌ನಲ್ಲಿ ಬಿಡಿಎಯಿಂದ ಮೊದಲನೇ ಹಂತದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಪ್ರಸ್ತಾವಿತ ಮೇಲ್ಸೇತುವೆ ಹಾಗೂ ಕೆಳಸೇತುವೆ ಕಾಮಗಾರಿ, ಮೆಟ್ರೊ ಕಾಮಗಾರಿ, ಕೆ–ರೈಡ್‌ನಿಂದ ಉಪನಗರ ರೈಲು ಯೋಜನೆಯ ಕಾಮಗಾರಿ, ಪಾಲಿಕೆಯಿಂದ ಸುರಂಗ ಮಾರ್ಗ ಸಹಿತ ವಿವಿಧ ಕಾಮಗಾರಿಗಳು ನಡೆಯಲಿವೆ. ಎಲ್ಲ ಕಾಮಗಾರಿಗಳನ್ನು ಗಮನದಲ್ಲಿ ಇಟ್ಟುಕೊಂಡು ಸಮಗ್ರ ಸಂಪರ್ಕ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ADVERTISEMENT

ಸಂಚಾರ ದಟ್ಟಣೆ ನಿಯಂತ್ರಿಸಲು ಪಾದಚಾರಿಗಳಿಗೆ ಸಮಸ್ಯೆಯಾಗದಂತೆ ಯೋಜನೆ ರೂಪಿಸಬೇಕು. ಕೆ.ಆರ್‌.ಪುರ ಕಡೆಯಿಂದ ನಗರದೊಳಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜಂಕ್ಷನ್‌ನಲ್ಲಿ ರಸ್ತೆ ಮೇಲ್ಮೈ ಹಾಳಾಗಿದ್ದು, ಡಾಂಬರು ಹಾಕಿ ಸರಿಪಡಿಸಬೇಕು. ಹೆಬ್ಬಾಳದಿಂದ ಹೆಣ್ಣೂರುವರೆಗೆ ರಾಜಕಾಲುವೆ ಪಕ್ಕದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಗೊರಗುಂಟೆ ಪಾಳ್ಯದಿಂದ ಕೆ.ಆರ್ ಪುರದವರೆಗೆ ಹೈಡೆನ್ಸಿಟಿ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.  ಆರ್.ಜಿ. ಯುನಿಕ್ ಸ್ಟ್ರಕ್ಚರ್ ಕಂಪನಿ ಮಳೆನೀರು ಚರಂಡಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಪೊಲೀಸರ ಸಹಯೋಗದಲ್ಲಿ ಒತ್ತುವರಿ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.

ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಜಯನಗರ ವ್ಯಾಪ್ತಿಯಲ್ಲಿ ಬರುವ ಬಿಡಿಎ ಕಾಂಪ್ಲೆಕ್ಸ್‌ನ ಬ್ಲಾಕ್ 1 ಅನ್ನು ಪರಿಶೀಲಿಸಿದರು.

ಯೋಜನಾ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ಸಂಚಾರ ವಿಭಾಗದ ಪೊಲೀಸ್ ಜಂಟಿ ಕಮಿಷನರ್‌ ಎಂ.ಎನ್‌. ಅನುಚೇತ್, ವಲಯ ಆಯುಕ್ತರಾದ ಕರೀಗೌಡ, ಸ್ನೇಹಲ್, ರಮ್ಯಾ, ವಿನೋತ್ ಪ್ರಿಯಾ, ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್ ಭಾಗವಹಿಸಿದ್ದರು.

ನೀರು ನಿಲ್ಲದಂತೆ ಮೆಟ್ರೊ ಕಾಮಗಾರಿ

ನಿರ್ವಹಿಸಿ ನಾಗವಾರ ಜಂಕ್ಷನ್‌ನಲ್ಲಿ ಮೆಟ್ರೊ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಮಳೆಗಾಲದಲ್ಲಿ ಜಲಾವೃತವಾಗುತ್ತದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ರಾಜಕಾಲುವೆ ನಿರ್ಮಿಸಿ ನೀರು ನಿಲ್ಲದಂತೆ ಬಿಎಂಆರ್‌ಸಿಎಲ್‌ ಕ್ರಮ ಕೈಗೊಳ್ಳಬೇಕು. ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿಯೂ ಮಳೆ ನೀರು ನಿಲ್ಲದಂತೆ ಇದೇ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಎಸ್‌.ಆರ್‌. ಉಮಾಶಂಕರ್‌ ತಿಳಿಸಿದರು.

ಕೆಂಪಾಪುರ ಜಂಕ್ಷನ್ ಬಳಿ ಮೆಟ್ರೊ ನಿಲ್ದಾಣ ಕಾಮಗಾರಿಗಾಗಿ ಪ್ರಮುಖ ರಸ್ತೆಯಲ್ಲಿ ಎರಡೂ ಬದಿ ತಲಾ ಮೂರು ಪಥಗಳ ವ್ಯವಸ್ಥೆ ಮಾಡಿಕೊಂಡು ಹೊರ ವರ್ತುಲ ರಸ್ತೆಯ ಎರಡೂ ಸರ್ವೀಸ್ ರಸ್ತೆಗಳಲ್ಲಿ ಸಂಚಾರವನ್ನು ನಿಲ್ಲಿಸಲಾಗುವುದು ಎಂದು ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದರು. ‘ರಾತ್ರಿ ಸಂಚಾರ ದಟ್ಟಣೆ ಕಡಿಮೆ ಇರುವುದರಿಂದ ಆ ಸಮಯದಲ್ಲಿ ಕೆಲಸ ಮಾಡಿ’ ಎಂದು ಉಮಾಶಂಕರ್‌ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.