ADVERTISEMENT

ಬೆಂಗಳೂರಿನ ಕಮಲಾನಗರದಲ್ಲಿ ಕುಸಿಯುವ ಹಂತದಲ್ಲಿ ಕಟ್ಟಡ: ಓಡೋಡಿ ಹೊರ ಬಂದ ಜನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 7:51 IST
Last Updated 13 ಅಕ್ಟೋಬರ್ 2021, 7:51 IST
ಬೆಂಗಳೂರಿನ ಕಮಲಾನಗರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ವಾಲಿರುವ ದೃಶ್ಯ –ಪ್ರಜಾವಾಣಿ ಚಿತ್ರ / ರಂಜು ಪಿ
ಬೆಂಗಳೂರಿನ ಕಮಲಾನಗರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ವಾಲಿರುವ ದೃಶ್ಯ –ಪ್ರಜಾವಾಣಿ ಚಿತ್ರ / ರಂಜು ಪಿ   

ಬೆಂಗಳೂರು: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಮಲಾನಗರದ ಶಂಕರ್‌ನಾಗ್ ಬಸ್‌ ನಿಲ್ದಾಣದ ಸನಿಹವಿರುವ ಮೂರು ಮಹಡಿಯ ಕಟ್ಟಡವೊಂದು ಕುಸಿಯುವ ಹಂತದಲ್ಲಿದೆ. ಕಟ್ಟಡವು ವಾಲುವಾಗ ಉಂಟಾದ ಶಬ್ದದಿಂದ ಭಯಭೀತರಾದ ನಿವಾಸಿಗಳು ಮನೆಯಿಂದ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.

ವಿಷಯ ತಿಳಿದೊಡನೆ ಸ್ಥಳಕ್ಕೆ ಧಾವಿಸಿರುವ ಎನ್‌ಡಿ‌ಆರ್‌ಎಫ್ ತಂಡ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕದ ಮನೆಗಳನ್ನೂ ತೆರವುಗೊಳಿಸಲಾಗಿದೆ. ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಕಟ್ಟಡವನ್ನು ನೆಲಸಮಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕೆ ಸೂಕ್ತ ಯೋಜನೆಯನ್ನೂ ರೂಪಿಸಿದ್ದಾರೆ.

ಸಚಿವ ಗೋಪಾಲಯ್ಯನವರೂ ಸ್ಥಳಕ್ಕೆ ಧಾವಿಸಿದ್ದು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಸ್ಥಳೀಯರಿಗೆ ಧೈರ್ಯ ತುಂಬಿದ್ದಾರೆ.

ADVERTISEMENT

'ಅಗತ್ಯ ವಸ್ತುಗಳೆಲ್ಲಾ ಮನೆಯಲ್ಲೇ ಇವೆ. ಬೆಲೆಬಾಳುವ ವಸ್ತುಗಳನ್ನೂ ಬಿಟ್ಟುಬಂದಿದ್ದೇವೆ. ಅವುಗಳನ್ನ ತಂದುಕೊಡಿ ಎಂದು ನಿವಾಸಿಗಳು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂತು.

'ಕಟ್ಟಡದಲ್ಲಿ ಒಟ್ಟು ಆರು ಮನೆಗಳಿವೆ. ನೀರಿನ ವ್ಯವಸ್ಥೆ ಇಲ್ಲ ಎಂದು ಈಗಾಗಲೇ ಮೂರು ಕುಟುಂಬಗಳು ಮನೆ ಖಾಲಿ ಮಾಡಿವೆ. ನಾವು ಕೂಡ ಬೇರೆ ಮನೆಗೆ ಹೋಗಲು ಸಿದ್ಧರಾಗಿದ್ದೆವು. ಮನೆ ನೋಡಿ ಹಾಲು ಉಕ್ಕಿಸಿ ಬಂದಿದ್ದೆವು. ಬುಧವಾರ ಬೆಳಿಗ್ಗೆ ಮನೆ ಖಾಲಿ ಮಾಡಲು ನಿರ್ಧರಿಸಿದ್ದೆವು. ಅಷ್ಟರಲ್ಲಿ ಹೀಗಾಗಿದೆ' ಎಂದು ಕಟ್ಟಡದ ನಿವಾಸಿಯೊಬ್ಬರು ತಿಳಿಸಿದರು.

'ಮಕ್ಕಳಿಬ್ಬರು ರಾತ್ರಿಪಾಳಿ ಇದ್ದಿದ್ದರಿಂದ ಕೆಲಸಕ್ಕೆ ಹೋಗಿದ್ದರು. ನಾನು, ಮಗಳು ಹಾಗೂ ಪತಿ ಮನೆಯ ಹಾಲ್‌ನಲ್ಲಿ ಮಾತನಾಡುತ್ತ ಕುಳಿತಿದ್ದೆವು. ಈ ವೇಳೆ ಜೋರು ಶಬ್ದ ಕೇಳಿಸಿತು. ಭಯಗೊಂಡು ಹೊರಗೆ ಓಡಿಬಂದು ನೋಡಿದರೆ ಕಟ್ಟಡ ವಾಲಿತ್ತು' ಎಂದರು.

'ರಾಜೇಶ್ವರಿ ಎಂಬುವವರು ಈ ಕಟ್ಟಡದ ಮಾಲೀಕರು. ಸುತ್ತಮುತ್ತಲಿನ ಜನರ ಬಳಿ ಸಾಲ ಮಾಡಿಕೊಂಡಿರುವ ಅವರು ವರ್ಷದ ಹಿಂದೆಯೇ ಬಡಾವಣೆ ಬಿಟ್ಟು ಹೋಗಿದ್ದಾರೆ. ಎಲ್ಲೊ ಪಿಜಿಯಲ್ಲಿದ್ದಾರೆ ಎಂಬುದು ಗೊತ್ತಾಗಿತ್ತು. ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿದೆ' ಎಂದು ತಿಳಿಸಿದರು.

'ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡದ ಪಾಯ ಕುಸಿದಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಪಟ್ಟಿಯನ್ನು ಈಗಾಗಲೇ ಸಿದ್ಧಗೊಳಿಸಿದ್ದೇವೆ. ನಮ್ಮ ಪಟ್ಟಿಯಲ್ಲಿ ಈ ಕಟ್ಟಡವೂ ಇತ್ತು. ಸದ್ಯ ನಿವಾಸಿಗಳನ್ನೆಲ್ಲಾ ಬೇರೆಡೆ ಸ್ಥಳಾಂತರಿಸಿದ್ದೇವೆ. ಕಟ್ಟಡ ನೆಲಸಮಗೊಳಿಸುವಂತೆ ಸೂಚಿಸಲಾಗಿದೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

'ಮಂಗಳವಾರ ತಡ ರಾತ್ರಿಯೇ ಸುತ್ತಮುತ್ತಲಿನ ಕಟ್ಟಡದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಕೆಲವರನ್ನು ಸರ್ಕಾರಿ ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕೆಲವರು ಅವರ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಮನೆ ಮಾಲೀಕರು ನಾಪತ್ತೆಯಾಗಿದ್ದಾರೆ. ಪೊಲೀಸರು ಅವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ' ಎಂದು ಸಚಿವ ಗೋಪಾಲಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.