ಬೆಂಗಳೂರು: ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ (ಸಿ ಆ್ಯಂಡ್ ಡಿ) ತ್ಯಾಜ್ಯವನ್ನು ಸಂಸ್ಕರಣೆ ಘಟಕಕ್ಕೆ ಕಳುಹಿಸಬೇಕೆಂಬ ನಿಯಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳೇ ಪಾಲಿಸುತ್ತಿಲ್ಲ.
’ಸಿ ಆ್ಯಂಡ್ ಡಿ’ ತ್ಯಾಜ್ಯವನ್ನು ರಸ್ತೆ, ಕಾಲುವೆಗಳಲ್ಲಿ ವಿಲೇವಾರಿ ಮಾಡದೆ ಅದನ್ನು ಸಂಸ್ಕರಣೆ ಘಟಕಕ್ಕೇ ಕಳುಹಿಸಬೇಕು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಧಿಸೂಚಿಸಿದ್ದು, ಅದನ್ನು ಬಿಬಿಎಂಪಿ ನಿರ್ವಹಿಸಬೇಕು ಎಂದು ಸೂಚಿಸಿದೆ. ಅದರಂತೆ ಬಿಬಿಎಂಪಿ 2019ರಲ್ಲೇ ಪ್ರಕಟಣೆ ಹೊರಡಿಸಿದ್ದರೂ ಈವರೆಗೆ ಜಾರಿಯಾಗಿಲ್ಲ.
ನಗರದಲ್ಲಿ ಹಲವೆಡೆ ಕಾಮಗಾರಿಗಳು ನಡೆಯುತ್ತಿದ್ದು, ‘ಸಿ ಆ್ಯಂಡ್ ಡಿ’ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ ಸಂಸ್ಕರಣೆ ಘಟಕಕ್ಕೆ ಕಳುಹಿಸುತ್ತಿಲ್ಲ. ಚಿಕ್ಕಜಾಲದಲ್ಲಿ ಪ್ರತಿ ದಿನ 1 ಸಾವಿರ ಮೆಟ್ರಿಕ್ ಟನ್ ಹಾಗೂ ಬಾಗಲೂರು ಬಳಿಯ ಕಣ್ಣೂರಿನಲ್ಲಿ 750 ಮೆಟ್ರಿಕ್ ಟನ್ ಸಾಮರ್ಥ್ಯದ ಸಂಸ್ಕರಣಾ ಘಟಕವಿದೆ. ಆದರೆ, ಇವೆರಡು ಘಟಕಗಳಿಗೆ ದಿನಕ್ಕೆ ತಲಾ 100 ಮೆಟ್ರಿಕ್ ಟನ್ ‘ಸಿ ಆ್ಯಂಡ್ ಡಿ’ ತ್ಯಾಜ್ಯ ಮಾತ್ರ ಸೇರುತ್ತಿದೆ. ಪ‍್ರತಿ ಮೆಟ್ರಿಕ್ ಟನ್‌ಗೆ ₹134 ಪಾವತಿಸಿ, ಸಂಸ್ಕರಣೆ ಘಟಕಕ್ಕೆ ನೀಡಬೇಕು.
ನಗರದಲ್ಲಿ ಪ್ರತಿನಿತ್ಯ ಸಾವಿರಾರು ಮೆಟ್ರಿಕ್ ಟನ್ ’ಸಿ ಆ್ಯಂಡ್ ಡಿ’ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದರೂ, ನಿಯಮಾನುಸಾರ ಅದು ಸಂಸ್ಕರಣೆ ಘಟಕ ತಲುಪಬೇಕು. ಆದರೆ, ಅದೆಲ್ಲ ರಸ್ತೆ ಬದಿ, ಕ್ವಾರಿ, ಕೆರೆ ಪ್ರದೇಶಗಳಲ್ಲಿ ವಿಲೇವಾರಿಯಾಗುತ್ತಿದೆ. ಬಿಬಿಎಂಪಿ ಕಾನೂನು ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಮರುಬಳಕೆಯನ್ನೂ ಮಾಡುತ್ತಿಲ್ಲ ಎಂದು ಪರಿಸರ ಕಾರ್ಯಕರ್ತ ರಾಮ್‌ಪ್ರಸಾದ್ ದೂರಿದರು.
ಘಟಕಕ್ಕೆ ಬರುತ್ತಿಲ್ಲ... ನಷ್ಟವಾಗುತ್ತಿದೆ...
‘ಸಿ ಆ್ಯಂಡ್ ಡಿ’ ತ್ಯಾಜ್ಯವನ್ನು ಸಂಸ್ಕರಿಸುವ ಎರಡು ಘಟಕಗಳನ್ನು ತಲಾ ₹5 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಚಿಕ್ಕಜಾಲದಲ್ಲಿರುವ ರಾಕ್ ಕ್ರಿಸ್ಟಲ್ಸ್ ಘಟಕವನ್ನು ನಮ್ಮದೇ ಜಾಗದಲ್ಲಿ ಸ್ಥಾಪಿಸಿದ್ದೇವೆ. ಬಾಗಲೂರು ಸಮೀಪದ ಕಣ್ಣೂರು ಗ್ರಾಮದಲ್ಲಿ ಬಿಬಿಎಂಪಿ ನೀಡಿರುವ ಜಾಗದಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ. ಇಲ್ಲಿಗೆ ನಿರೀಕ್ಷಿತ ಮಟ್ಟದಲ್ಲಿ ಸಿ ಆ್ಯಂಡ್ ಡಿ ತ್ಯಾಜ್ಯ ಬರುತ್ತಿಲ್ಲ. ಹೀಗಾಗಿ ನಾವು ಸಂಸ್ಕರಣೆ ಮಾಡಲಾಗುತ್ತಿಲ್ಲ. ಸಂಸ್ಕರಿತ ಸಾಮಗ್ರಿಗೆ ಬೇಡಿಕೆ ಇದ್ದರೂ ಅದನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಎಲ್ಲೆಡೆ ಉತ್ಪತ್ತಿಯಾಗುವ ಸಿ ಆ್ಯಂಡ್ ಡಿ ತ್ಯಾಜ್ಯ ಸಂಸ್ಕರಣೆ ಘಟಕಗಳಿಗೇ ಬಂದರೆ ಅಂದಾಜು ಐದಾರು ಘಟಕಗಳನ್ನು ಸ್ಥಾಪಿಸಬೇಕಾಗುತ್ತದೆ. ಆದರೆ, ಇರುವ ಎರಡು ಘಟಕಕ್ಕೇ ತ್ಯಾಜ್ಯ ಬರದೆ, ನಮಗೆ ನಷ್ಟವಾಗುತ್ತಿದೆ’ ಎಂದು ಕ್ರಿಸ್ಟಲ್ಸ್ ಘಟಕದ ರಾಜೇಶ್ ಹೇಳಿದರು.
ನಿಯಮವೇನು?
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ‘ಸಿ ಆ್ಯಂಡ್ ಡಿ’ ತ್ಯಾಜ್ಯದ ಅಪಾಯಕಾರಿ ವಿಲೇವಾರಿಯಿಂದ ಜಲಮೂಲ, ಗಾಳಿ ಗುಣಮಟ್ಟದ ಮೇಲೆ ದುಷ್ಪರಿಣಾಮವಾಗುತ್ತಿದೆ. ಹೀಗಾಗಿ, ನೈಸರ್ಗಿಕ ಸಂಪನ್ಮೂಲ ರಕ್ಷಿಸಲು ‘ನಿರ್ಮಾಣ ಮತ್ತು ಕಟ್ಟಡ ಕೆಡವಿದ ತ್ಯಾಜ್ಯ ನಿರ್ವಹಣೆ ನಿಯಮಗಳು– 2016’ ಜಾರಿಗೊಳಿಸಿದೆ. ಈ ಅಧಿಸೂಚನೆ ಅನ್ವಯ ವೈಜ್ಞಾನಿಕವಾಗಿ ಸಿ ಆ್ಯಂಡ್ ಡಿ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಅಲ್ಲದೆ, ನಿರ್ಮಾಣ ಕಾಮಗಾರಿ, ರಸ್ತೆ ಕಾಮಗಾರಿಗಳಲ್ಲಿ ಸಂಸ್ಕರಿತ ಮರುಬಳಕೆ ಉತ್ಪನ್ನಗಳಾದ ಸ್ಕ್ರೀನ್ಡ್ ಮರಳು ಮತ್ತು ಗ್ರಾನುಲರ್ ಸಬ್‌ಬೇಸ್ ಅನ್ನು ಕನಿಷ್ಠ ಶೇ 20ರಷ್ಟು ಬಳಸಬೇಕು ಎಂದು ಅಧಿಸೂಚನೆ ಹೊರಡಿಸಿದೆ. ಇದನ್ನು ಟೆಂಡರ್‌ಗಳ ಷರತ್ತಿನಲ್ಲಿ ಅಳವಡಿಸಬೇಕು. ಈ ನಿಯಮಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇದನ್ನು ಉಲ್ಲಂಘಿಸಿದವರ ಮೇಲೆ ಪರಿಸರ ಸಂರಕ್ಷಣೆ ಕಾಯ್ದೆ 1986 ಹಾಗೂ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ 1976 ಮತ್ತು ಅನ್ವಯವಾಗುವ ಎಲ್ಲ ಕಾನೂನುಗಳಂತೆ ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಲಾಗಿದೆ.
ಯಾರಿಗೆ ಅನ್ವಯ?: ಬಿಎಂಆರ್‌ಸಿಎಲ್, ಎನ್‌ಎಚ್ಎಐ, ಭಾರತೀಯ ರೈಲ್ವೆ, ವಿಮಾನ ನಿಲ್ದಾಣ ಪ್ರಾಧಿಕಾರಗಳು, ಟೆಲಿಕಾಂ ಆಪರೇಟರ್‌ಗಳು, ಸಿಪಿಡಬ್ಲ್ಯೂಡಿ, ಜಿಎಐಎಲ್, ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಕೆಪಿಟಿಸಿಎಲ್, ಬಿಡಿಎ, ಪಿಡಬ್ಲ್ಯೂಡಿ.
ಇಲಾಖೆಗಳಿಗೆ ಪತ್ರ: ತುಷಾರ್
‘ಸಿ ಆ್ಯಂಡ್ ಡಿ’ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ತಲುಪುತ್ತಿಲ್ಲ ಎಂಬ ವಿಷಯ ಗಮನದಲ್ಲಿದೆ. ಬಿಬಿಎಂಪಿ ಸೇರಿದಂತೆ ಎಲ್ಲ ಇಲಾಖೆಗಳೂ ಜವಾಬ್ದಾರಿಯುತವಾಗಿ ಈ ತ್ಯಾಜ್ಯವನ್ನು ಸಂಸ್ಕರಣೆ ಘಟಕಕ್ಕೆ ತಲುಪಿಸಬೇಕು. ಈ ಬಗ್ಗೆ ಮತ್ತೊಮ್ಮೆ ಎಲ್ಲ ಇಲಾಖೆಗಳಿಗೂ ಪತ್ರ ಬರೆದು, ಅರಿವು ಮೂಡಿಸಲಾಗುವುದು. ಅದಾಗದಿದ್ದರೆ ಕಾನೂನು ಕ್ರಮವನ್ನೂ ತೆಗೆದುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.