ADVERTISEMENT

ನಿಯಮಗಳು ಗಾಳಿಗೆ; ಕಟ್ಟಡಗಳು ಧರೆಗೆ!

* ಬೈಲಾ ಉಲ್ಲಂಘಿಸಿವೆ 18 ಸಾವಿರ ಕಟ್ಟಡಗಳು * ವರದಿಗಳು ಕೈಸೇರಿದರೂ ಪಾಲಿಕೆ ಮೌನ * ‘ಕಾಗದದ ಹುಲಿ’ಯಾದ ಅಗ್ನಿಶಾಮಕ ಇಲಾಖೆ

ಎಂ.ಸಿ.ಮಂಜುನಾಥ
Published 5 ಏಪ್ರಿಲ್ 2019, 4:44 IST
Last Updated 5 ಏಪ್ರಿಲ್ 2019, 4:44 IST
ಕಸವನಹಳ್ಳಿಯಲ್ಲಿ ಕಳೆದ ವರ್ಷ ಕಟ್ಟಡವೊಂದು ಉರುಳಿದಾಗ...  (ಸಂಗ್ರಹ ಚಿತ್ರ)
ಕಸವನಹಳ್ಳಿಯಲ್ಲಿ ಕಳೆದ ವರ್ಷ ಕಟ್ಟಡವೊಂದು ಉರುಳಿದಾಗ...  (ಸಂಗ್ರಹ ಚಿತ್ರ)   

ಬೆಂಗಳೂರು: ‘ಬೈಲಾ’ ಪ್ರಕಾರ ಹದಿನೈದು ಮೀಟರ್‌ಗಿಂತ ಎತ್ತರವಿರುವ ಕಟ್ಟಡವನ್ನು ‘ಬಹುಮಹಡಿ ಕಟ್ಟಡ’ (ಹೈರೈಸ್ಡ್‌ ಬಿಲ್ಡಿಂಗ್) ಎಂದು ಪರಿಗಣಿಸಲಾಗುತ್ತದೆ. ಇಂತಹ ಸುಮಾರು 22,500 ಕಟ್ಟಡಗಳು ರಾಜಧಾನಿಯಲ್ಲಿವೆ. ಈ ಪೈಕಿ ನಿರಾಕ್ಷೇಪಣಾ ಪತ್ರದ (ಎನ್‌ಒಸಿ) ನಿಯಮಗಳನ್ನು ಪಾಲಿಸುತ್ತಿರುವುದು ನಾಲ್ಕೂವರೆ ಸಾವಿರ ಕಟ್ಟಡಗಳು ಮಾತ್ರ!

ಬೆಂಗಳೂರು ಹೊರತುಪಡಿಸಿದಂತೆ 5,200ಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳು ರಾಜ್ಯದಲ್ಲಿವೆ. ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಎಲ್ಲ ಕಟ್ಟಡಗಳನ್ನು ಪರಿಶೀಲನೆ ಮಾಡಿದ್ದಾರೆ ಎಂದುಕೊಂಡರೂ, ಕೆಲ ವರ್ಷಗಳ ನಂತರ ಕಟ್ಟಡದಲ್ಲಿನ ಪರಿಸ್ಥಿತಿ ಏನು? ಅಲ್ಲಿರುವ ಅಗ್ನಿ ನಂದಕಗಳು ಕೆಲಸ ಮಾಡುತ್ತಿವೆಯೇ? ಎನ್‌ಓಸಿ ಪಡೆದ ನಂತರ ಕಟ್ಟಡದ ವಿನ್ಯಾಸ ಬದಲಾಯಿಸಲಾಗಿದೆಯೇ ಎಂಬ ಬಗ್ಗೆ ತಪಾಸಣೆ ನಡೆಯುತ್ತಿಲ್ಲ.

ಎನ್‌ಒಸಿ ಪಡೆದು ಅಕ್ರಮ: ‘ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡ (1+4) ಹಾಗೂ 15 ಮೀಟರ್‌ಗಿಂತ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಅದನ್ನು ಸಂಬಂಧಪಟ್ಟ ಅಗ್ನಿಶಾಮಕ ಪ್ರಾದೇಶಿಕ ಅಧಿಕಾರಿಗಳಿಗೆ ತೋರಿಸಿ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮವನ್ನು ಬಹುಪಾಲು ಮಾಲೀಕರು ಪಾಲಿಸುತ್ತಿಲ್ಲ’ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಎನ್‌ಒಸಿ ಪಡೆಯುವಾಗ ಇರುವ ನಕ್ಷೆಯೇ ಬೇರೆ. ಕಟ್ಟಡ ನಿರ್ಮಿಸಿದಾಗ ಅದರ ಸ್ವರೂಪ ಇರುವುದೇ ಬೇರೆ. ನಕ್ಷೆ ಪರಿಶೀಲಿಸಿ ಎನ್‌ಒಸಿ ಕೊಡುವ ಅಧಿಕಾರವನ್ನಷ್ಟೇ ನಮಗೆ ನೀಡಿ ‘ಕಾಗದದ ಹುಲಿ’ಗಳನ್ನಾಗಿ ಮಾಡಲಾಗಿದೆ. ಕಟ್ಟಡಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಕೆಲಸ. ಆದರೆ, ಅದು ಸರಿಯಾಗಿ ಆಗುತ್ತಿಲ್ಲ’ ಎಂದು ವಿವರಿಸಿದರು.

‘2012ರಿಂದ ಈಚೆಗೆ ನಗರದಲ್ಲಿ 18 ಬಹುಮಹಡಿ ಕಟ್ಟಡಗಳು ಕುಸಿದು, 44 ಮಂದಿ ಅಸುನೀಗಿದ್ದಾರೆ. ದುರಂತ ಸಂಭವಿಸಿದಾಗ ರಕ್ಷಣಾ ಕಾರ್ಯಾಚರಣೆ ನಡೆಸುವ ನಮಗೆ, ನಿಯಮ ಉಲ್ಲಂಘಿಸುವವರನ್ನು ಬಂಧಿಸುವ ಅಥವಾ ಕ್ರಮ ಜರುಗಿಸುವ ಅಧಿಕಾರವನ್ನು ಸರ್ಕಾರ ಕೊಟ್ಟಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ವರದಿ ಕೊಟ್ಟರೂ ಕ್ರಮವಿಲ್ಲ: ‘2010ರಲ್ಲಿ ಕಾರ್ಲ್‌ಟನ್ ಟವರ್ ಕಟ್ಟಡ ದುರಂತದ ಬಳಿಕ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಗ್ನಿಶಾಮಕ ಇಲಾಖೆ, ಆ ನಂತರ ಸಂಭವಿಸಿದ ಎಲ್ಲ ದುರಂತಗಳ ಬಗ್ಗೆಯೂ ತನಿಖೆ ನಡೆಸಿ ಸ್ಥಳೀಯ ಸಂಸ್ಥೆಗಳಿಗೆ ವರದಿಗಳನ್ನು ನೀಡುತ್ತಲೇ ಬಂದಿದೆ. ಆದರೆ, ಪ್ರಯೋಜನ ಮಾತ್ರ ಶೂನ್ಯ’ ಎಂದು ಇತ್ತೀಚೆಗೆ ನಿವೃತ್ತರಾದ ಅಗ್ನಿಶಾಮಕ ಇಲಾಖೆ ಉಪ ನಿರ್ದೇಶಕ ಎನ್.ಆರ್.ಮಾರ್ಕಂಡೇಯ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಾದ್ಯಂತ ಒಟ್ಟು 12 ಸಾವಿರ ಅಪಾಯಕಾರಿ ಕಟ್ಟಡಗಳಿರುವುದನ್ನು ಪತ್ತೆ ಹಚ್ಚಿ, ಅವುಗಳ ವಿದ್ಯುತ್, ನೀರಿನ ಸಂಪರ್ಕ, ವಾಣಿಜ್ಯ ಚಟುವಟಿಕೆ ಪರವಾನಗಿ ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು. ಆದರೆ, ಇದುವರೆಗೂ ಮಾಲೀಕರ ವಿರುದ್ಧ ಕ್ರಮವಾಗಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

ಮೂಲೆ ಸೇರಿದ ವರದಿ: ‘2016ರ ಅ.6ರಂದು ಬೆಳ್ಳಂದೂರು ಗೇಟ್ ಬಳಿ ನಿರ್ಮಾಣ ಹಂತದ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿದ್ದರು. ಸ್ಥಳೀಯ ನಿವಾಸಿಗಳು, ತಜ್ಞರ ಹೇಳಿಕೆ ಸಂಗ್ರಹಿಸಿ 56‍‍ಪುಟಗಳ ತನಿಖಾ ವರದಿಯನ್ನು ಸಿದ್ಧಪಡಿಸಿದ್ದೆವು. ಕಟ್ಟಡ ಮಾಲೀಕರ ನಿರ್ಲಕ್ಷ್ಯದಿಂದ ಆ ಅವಘಡ ಸಂಭವಿಸಿತ್ತು ಎಂಬುದೂ ಸಾಬೀತಾಗಿತ್ತು. ಘಟನೆ ನಡೆದು 15 ದಿನಗಳೊಳಗೆ ವರದಿಯ ಪ್ರತಿಗಳನ್ನು ಬಿಬಿಎಂಪಿ ಅಧಿಕಾರಿಗಳಿಗೆ ಸಲ್ಲಿಸಿದ್ದೆವು. ಎರಡೂವರೆ ವರ್ಷ ಕಳೆದರೂ ಕ್ರಮವಾಗಿಲ್ಲ. ಅದನ್ನು ಪ್ರಶ್ನಿಸುವ ಹಕ್ಕೂ ನಮಗಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘2017ರ ಅಕ್ಟೋಬರ್‌ 16ರಂದು ಈಜಿಪುರ ಗುಂಡಪ್ಪ ಲೇಔಟ್‌ನಲ್ಲಿ ಕಟ್ಟಡ ಕುಸಿದು ಎಂಟು ಮಂದಿ ಮೃತಪಟ್ಟಿದ್ದ ಬಗ್ಗೆಯೂ ತನಿಖೆ ನಡೆಸಿದ್ದೆವು. ಆ ಕಟ್ಟಡವು ವಾಸಕ್ಕೆ ಯೋಗ್ಯವಿಲ್ಲ ಎಂಬುದು ಬಿಬಿಎಂಪಿ ಅಧಿಕಾರಿಗಳಿಗೆ ವರ್ಷದ ಹಿಂದೆಯೇ ಗೊತ್ತಿತ್ತು. ಅಷ್ಟಾದರೂ, ಅವರು ಕಟ್ಟಡ ತೆರವುಗೊಳಿಸಲು ಕ್ರಮ ಕೈಗೊಂಡಿರಲಿಲ್ಲ. ಈ ಎಲ್ಲ ಅಂಶಗಳನ್ನು ಒಳಗೊಂಡ ವರದಿಯನ್ನು ಉನ್ನತ ಅಧಿಕಾರಿಗಳಿಗೆ ಕೊಟ್ಟಿದ್ದೆವು. ಅದೂ ಮೂಲೆ ಸೇರಿತು’ ಎಂದು ವಿವರಿಸಿದರು.

ದೂಳು ತಿನುತ್ತಿದೆ ಕಟ್ಟಡಗಳ ಬೈಲಾ!

ಬೆಂಗಳೂರು: ‘ಕರ್ನಾಟಕ ನಗರಪಾಲಿಕೆ ಸಾಮಾನ್ಯ ಕಟ್ಟಡಗಳ ಬೈಲಾ–2017’ ಕರಡು ಸಿದ್ಧಗೊಂಡು ಒಂದೂವರೆ ವರ್ಷ ಕಳೆದರೂ, ಅನುಮೋದನೆ ದೊರೆಯದೆ ಸರ್ಕಾರದ ಮುಂದೆ ದೂಳು ಹಿಡಿಯುತ್ತಿದೆ. ಮಾದರಿ ಬೈಲಾ ಇಲ್ಲದ ‌ಕಾರಣ ಸ್ಥಳೀಯ ಸಂಸ್ಥೆಗಳು ತಾವೇ ಮಾಡಿಕೊಂಡಿರುವ ಬೈಲಾಗಳನ್ನು ‌ಆಧರಿಸಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡುತ್ತಿವೆ.‌‌

ಸಾರ್ವಜನಿಕರಿಗೆ ಕಿರಿಕಿರಿ ಎನಿಸುವ ನಿಯಮಗಳನ್ನು ಕೈಬಿಟ್ಟು ಮಾದರಿ ನಿಯಮಗಳನ್ನು ಕೇಂದ್ರ ಸರ್ಕಾರ ರಚಿಸಿ ರಾಜ್ಯಗಳಿಗೆ ಕಳುಹಿಸಿತ್ತು. ಅದನ್ನು ಆಧರಿಸಿ ನಗರ ಯೋಜನೆಗಳ ಇಲಾಖೆ ‘ಬೈಲಾ’ ಕರಡು ಸಿದ್ಧಪಡಿಸಿ 2017ರ ಅಕ್ಟೋಬರ್‌ನಲ್ಲಿ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಿದೆ.

ನಗರಸಭೆಗೆ ಮತ್ತು ಪಾಲಿಕೆಗಳಿಗೆ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗಿದೆ. ಇದು ಜಾರಿಗೆ ಬಂದರೆ ಪಾಲಿಕೆಗಳು ಮತ್ತು ನಗರಸಭೆಗಳು ಏಕರೂಪದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಹೊಸ ಬೈಲಾದ ಪ್ರಕಾರ, ಕಟ್ಟಡ ಕಟ್ಟುವ ಮುನ್ನ ನಕ್ಷೆ ಸಿದ್ಧಪಡಿಸಿಕೊಂಡು ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆದಿರಬೇಕು. ಲಿಫ್ಟ್‌, ಅಗ್ನಿಶಾಮಕ ಸಲಕರಣೆ, ರ‍್ಯಾಂಪ್, ಮಕ್ಕಳ ಓಡಾಟಕ್ಕೂ ಅನುಕೂಲ ಆಗುವಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ. ಮಳೆನೀರು ಸಂಗ್ರಹ ಘಟಕ ಹಾಗೂ ಕಸ ಸಂಗ್ರಹಣೆಗೆ ಜಾಗ ಕಲ್ಪಿಸಿಕೊಳ್ಳಬೇಕು ಎಂಬ ನಿಯಮಗಳನ್ನೂ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ಅಧಿಕಾರಿಯೇ ಹೊಣೆ‌

ಅನಧಿಕೃತ ಅಥವಾ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣವಾದರೆ ಆ ವ್ಯಾಪ್ತಿಗೆ ಬರುವ ಅಧಿಕಾರಿಯನ್ನೇ ಹೊಣೆ ಮಾಡುವ ನಿಯಮಗಳನ್ನು ಒಳಗೊಂಡ ಮಾರ್ಗಸೂಚಿಯ ಕರಡು ಕೂಡ 2018ರಲ್ಲಿ ಸಿದ್ಧಗೊಂಡಿದೆ. ಆದರೆ, ಅದಕ್ಕೂ ಅನುಮೋದನೆ ಸಿಕ್ಕಿಲ್ಲ.

ಯಾವ ತಪ್ಪಿಗೆ ಎಷ್ಟು ಶಿಕ್ಷೆ:

* ಕೆಎಂಸಿ ಕಾಯ್ದೆ ಉಲ್ಲಂಘಿಸಿ ಕಟ್ಟಡ ನಿರ್ಮಾಣವಾದರೆ ಆ ವ್ಯಾಪ್ತಿಯ ಅಧಿಕಾರಿಗೆ ಎರಡು ವರ್ಷ ಜೈಲು ಮತ್ತು ₹50 ಸಾವಿರದವರೆಗೆ ದಂಡ.

* ಸಾರ್ವಜನಿಕರ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿದರೆ 10 ದಿನಗಳ ಜೈಲು ಮತ್ತು ₹5,000 ದಂಡ.

* ಉದ್ದೇಶ ಪೂರ್ವಕವಾಗಿ ನಕ್ಷೆ ತಿರಸ್ಕರಿಸಿದರೆ ಅಥವಾ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದರೆ ಒಂದು ವರ್ಷ ಜೈಲು ಮತ್ತು ₹25,000ರವರೆಗೆ ದಂಡ.

* ನಕ್ಷೆ ಉಲ್ಲಂಘಿಸಿ ಚಾವಣಿಯನ್ನು ಹೊರಭಾಗಕ್ಕೆ ವಿಸ್ತರಿಸಿದರೆ, ಪೆಂಡಾಲು ಅಥವಾ ಗೋಡೆಗಳನ್ನು ಕಟ್ಟಿದರೆ, ಸುಲಭವಾಗಿ ಬೆಂಕಿ ತಗುಲಬಹುದಾದ ಚಾವಣಿ ಹಾಕುವುದನ್ನು ತಡೆಯಲು ವಿಫಲವಾದರೆ 2 ವರ್ಷ ಸಜೆ ಮತ್ತು ₹50 ಸಾವಿರ ದಂಡ.

* ಅನುಮತಿ ಕೇಳಿ ಬಂದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡದಿದ್ದರೆ ಎರಡು ದಿನ ಸಜೆ ಮತ್ತು 2 ಸಾವಿರ ದಂಡ.

* ಮನುಷ್ಯ ಜೀವಕ್ಕೆ ಅಪಾಯ ಇದೆ ಎಂದು ಕಂಡು ಬಂದ ಕಟ್ಟಡಗಳ ನಿರ್ಮಾಣ ತಡೆಯದಿದ್ದಲ್ಲಿ 2 ವರ್ಷ ಸಜೆ ಮತ್ತು ₹50 ಸಾವಿರ ದಂಡ.

*ಕಟ್ಟಡ ಪೂರ್ಣಗೊಂಡ ಮೇಲೆ ವಾಸ ಪ್ರಮಾಣ ಪತ್ರ ಪಡೆಯದೆ ವಾಸಕ್ಕೆ ತೆರಳುವುದನ್ನು ತಡೆಯದಿದ್ದರೆ 2 ವರ್ಷ ಸಜೆ ಮತ್ತು ₹50 ಸಾವಿರ ದಂಡ.

* ಅನುಮತಿ ಪಡೆಯದೆ ಗುಡಿಸಲು ನಿರ್ಮಾಣ ಆಗುವುದನ್ನು ತಡೆಯದಿದ್ದರೆ 2 ವರ್ಷ ಸಜೆ ಮತ್ತು ₹50 ಸಾವಿರ ದಂಡ.

2018ರಲ್ಲಿ ಸಂಭವಿಸಿದ ದುರಂತಗಳು

ಜ.18:ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕ ಶಬರೀಷ್‌ (36) ಮೃತಪಟ್ಟರು.

ಫೆ.15: ಸರ್ಜಾಪುರ ರಸ್ತೆಯ ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‍ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಉತ್ತರ ಪ್ರದೇಶದ ಗೋರಖ್‍ಪುರದ ಮೂವರು ಕಾರ್ಮಿಕರು ಮೃತಪಟ್ಟರು.

ಅ.24: ಜಕ್ಕೂರು ಲೇಔಟ್‌ನಲ್ಲಿ ಕಟ್ಟಡದ ಗುತ್ತಿಗೆದಾರ ಶಿಡ್ಲಘಟ್ಟದ ಮಧುಸೂದನ್ (24) ಮೃತಪಟ್ಟರು.

ನ.10:ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದ ‘ಸಾಯಿ ಗ್ರ್ಯಾಂಡ್’ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದು ಸುಫೇಲ್‌ ಮೃತಪಟ್ಟರು.

ಡಿ. 6:ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟರು.

ಡಿ.13:ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಆಶ್ರಮ ರಸ್ತೆಯಲ್ಲಿರುವ ‘ಹೋಲಿಸೋಲ್’ ಕಂಪನಿ ಕಟ್ಟಡ ದುರಂತದಲ್ಲಿ ಒಡಿಶಾದ ಮೂವರು ಕಾರ್ಮಿಕರು ಅಸುನೀಗಿದರು.

ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು

*ರಸ್ತೆಗೂ ಬಹುಮಹಡಿ ಕಟ್ಟಡಕ್ಕೂ 12 ಮೀಟರ್ ಅಂತರವಿರಬೇಕು

*ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗವಿರಬೇಕು

*ಚಾವಣಿಯಲ್ಲಿ ಮತ್ತು ನೆಲ ಅಂತಸ್ತಿನಲ್ಲಿ ನೀರಿನ ಟ್ಯಾಂಕ್ ಇರಬೇಕು

*ನೆಲ ಅಂತಸ್ತು ವಾಹನ ನಿಲುಗಡೆಗೆ ಮಾತ್ರ ಬಳಕೆಯಾಗಬೇಕು

*ಕಟ್ಟಡದಲ್ಲಿ ಒಬ್ಬ ಅಗ್ನಿ ಸುರಕ್ಷತಾ ಅಧಿಕಾರಿ ಇರಬೇಕು

lನೀರು ಕೊಳವೆ, ಎಲೆಕ್ಟ್ರಿಕ್ ಅಲಾರಾಂ ಹಾಗೂ ಅಗ್ನಿ ನಂದಕ ಸಲಕರಣೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು

lಕಟ್ಟಡದಲ್ಲಿ ಕನಿಷ್ಠ 2 ಕಡೆ ಮೆಟ್ಟಿಲು, ಲಿಫ್ಟ್ ಇರುವುದು ಕಡ್ಡಾಯ

lಅಗ್ನಿ ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಆಗಾಗ ಪ್ರಾತ್ಯಕ್ಷಿಕೆ ನೀಡಬೇಕು

lನಿರ್ಗಮನ ದ್ವಾರಗಳು ಕತ್ತಲಲ್ಲೂ ಗೋಚರವಾಗುವಂತೆ ಇರಬೇಕು

(ಆಧಾರ: ರಾಷ್ಟ್ರೀಯ ಕಟ್ಟಡ ನೀತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.