ಬೆಂಗಳೂರು: ಸಿನಿಮಾ ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದು, 5 ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ.
‘ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಅಯ್ಯಪ್ಪ ಅಲಿಯಾಸ್ ಮುರುಗೇಶ್ (36) ಹಾಗೂ ರವಿ (26) ಬಂಧಿತರು. ಇವರಿಬ್ಬರು ಠಾಣೆ ವ್ಯಾಪ್ತಿಯ 5 ಕಡೆಗಳಲ್ಲಿ ಕಳ್ಳತನ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳಿಂದ ₹ 13.53 ಲಕ್ಷ ಮೌಲ್ಯದ 261 ಗ್ರಾಂ ಚಿನ್ನಾಭರಣ ಹಾಗೂ 500 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನಂದಿನಿ ಲೇಔಟ್ 4ನೇ ಹಂತದ ರೈಲ್ವೆ ಮೆನ್ಸ್ ಕಾಲೊನಿಯಲ್ಲಿ ಪತಿ ಜೊತೆ ವಿನಯಾ ಪ್ರಸಾದ್ ವಾಸವಿದ್ದಾರೆ. ಕುಟುಂಬದವರೆಲ್ಲ ಅ. 22ರಂದು ಉಡುಪಿಗೆ ಹೋಗಿದ್ದರು. ಅ. 26ರಂದು ಸಂಜೆ ಮನೆಗೆ ವಾಪಸ್ ಬಂದು ನೋಡಿದಾಗ, ವಸ್ತುಗಳು ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದವು. ಪರಿಶೀಲಿಸಿದಾಗ ₹ 7 ಸಾವಿರ ನಗದು ಕಳ್ಳತನವಾಗಿದ್ದು ಗೊತ್ತಾಗಿತ್ತು. ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.
‘ಪ್ರಕರಣದ ತನಿಖೆ ಕೈಗೊಂಡಾಗ ಇಬ್ಬರೂ ಆರೋಪಿಗಳು ಸಿಕ್ಕಿಬಿದ್ದರು. ವಿನಯಾ ಪ್ರಸಾದ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ್ದ ಆರೋಪಿಗಳು, ಬಾಗಿಲು ಮೀಟಿ ಒಳನುಗ್ಗಿ ಕಳ್ಳತನ ಮಾಡಿದ್ದರು. ಆದರೆ, ಅವರಿಗೆ ₹ 7 ಸಾವಿರ ಮಾತ್ರ ಸಿಕ್ಕಿತ್ತು’ ಎಂದು ಹೇಳಿದರು.
26 ಪ್ರಕರಣಗಳಲ್ಲಿ ಆರೋಪಿಗಳು: ‘ಬಂಧಿತ ಆರೋಪಿಗಳು, ಅಪರಾಧ ಹಿನ್ನೆಲೆಯುಳ್ಳವರು. ಆರೋಪಿ ಅಯ್ಯಪ್ಪ ವಿರುದ್ಧ 17 ಪ್ರಕರಣ ಹಾಗೂ ರವಿ ವಿರುದ್ಧ 9 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ’ ಎಂದು ಪೊಲೀಸರು ತಿಳಿಸಿದರು.
‘ಚನ್ನರಾಯಪಟ್ಟಣದಿಂದ ಆಗಾಗ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಕದ್ದ ವಸ್ತುಗಳನ್ನು ಮಾರಾಟ ಮಾಡಿ, ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.