ADVERTISEMENT

ಬಿಎಂಟಿಸಿ ಡಿಪೊಗಳಿಗೆ ಬರಲಿದೆ ‘ಭೋಜನ ಬಂಡಿ’

ಗುಜರಿಗೆ ಹೋಗಬೇಕಾಗಿದ್ದ ಬಸ್‌ಗಳಿಗೆ ಮರುಜೀವ ನೀಡಿದ ತಾಂತ್ರಿಕ ಸಿಬ್ಬಂದಿ

ಬಾಲಕೃಷ್ಣ ಪಿ.ಎಚ್‌
Published 21 ಫೆಬ್ರುವರಿ 2024, 20:30 IST
Last Updated 21 ಫೆಬ್ರುವರಿ 2024, 20:30 IST
ಕಾರ್ಯಾಚರಣೆ ನಿಲ್ಲಿಸಿರುವ ಬಿಎಂಟಿಸಿ ಬಸ್‌ ಅನ್ನು ಕ್ಯಾಂಟೀನ್‌ ಆಗಿ ಪರಿವರ್ತಿಸಿರುವುದು.
ಕಾರ್ಯಾಚರಣೆ ನಿಲ್ಲಿಸಿರುವ ಬಿಎಂಟಿಸಿ ಬಸ್‌ ಅನ್ನು ಕ್ಯಾಂಟೀನ್‌ ಆಗಿ ಪರಿವರ್ತಿಸಿರುವುದು.   

ಬೆಂಗಳೂರು: ಹಳೇ ಬಸ್‌ಗಳನ್ನು ‘ಭೋಜನ ಬಂಡಿ’ ಹೆಸರಿನ ಕ್ಯಾಂಟೀನ್‌ಗಳನ್ನಾಗಿ ಪರಿವರ್ತಿಸಿ, ಕ್ಯಾಂಟೀನ್‌ಗಳಿಲ್ಲದ ಡಿಪೊಗಳಲ್ಲಿ ಅಳವಡಿಸಲು ಬಿಎಂಟಿಸಿ ನಿರ್ಧರಿಸಿದೆ. ಈಗಾಗಲೇ ಒಂದು ‘ಭೋಜನ ಬಂಡಿ’ ತಯಾರಾಗಿದ್ದು, ಯಶವಂತಪುರ ಅಥವಾ ಪೀಣ್ಯ ಡಿಪೊದಲ್ಲಿ ಅನುಷ್ಠಾನಗೊಳ್ಳಲಿದೆ.

ಬಿಎಂಟಿಸಿ ಉತ್ತರ ವಲಯದ 10 ಲಕ್ಷ ಕಿಲೋಮೀಟರ್‌ ಸಂಚರಿಸಿ, ಕಾರ್ಯ ಸ್ಥಗಿತಗೊಳಿಸಿರುವ ಬಸ್‌ ಅನ್ನು ಕಾರ್ಯಾಗಾರ–4ರ ಸಹಾಯಕ ತಾಂತ್ರಿಕ ಎಂಜಿನಿಯರ್‌ ಆರ್‌. ಆನಂದಕುಮಾರ್‌ ಮತ್ತು ತಾಂತ್ರಿಕ ಸಹಾಯಕರು ತಮ್ಮ ಕೈಚಳಕದಿಂದ ಕ್ಯಾಂಟೀನ್‌ ಆಗಿ ಪರಿವರ್ತಿಸಿದ್ದಾರೆ.

‘ವ್ಯವಸ್ಥಾಪಕ ನಿರ್ದೇಶಕರು, ಕೇಂದ್ರ ಕಚೇರಿಯ ಮುಖ್ಯ ತಾಂತ್ರಿಕ ಎಂಜಿನಿಯರ್‌, ಕೇಂದ್ರೀಯ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕರ ಮಾರ್ಗದರ್ಶನದಲ್ಲಿ ಬಸ್‌ ಕ್ಯಾಂಟೀನ್‌ ಮಾಡಲು ಸಾಧ್ಯವಾಯಿತು’ ಎಂದು ಆನಂದಕುಮಾರ್‌ ಪ್ರತಿಕ್ರಿಯಿಸಿದರು.

ADVERTISEMENT

ಈ ಕ್ಯಾಂಟೀನ್‌ ಬಸ್‌ಗೆ ‘ಭೋಜನ ಬಂಡಿ’ ಎಂದು ಹೆಸರಿಡಲಾಗಿದೆ. ಬಸ್‌ನ ಎರಡೂ ಬದಿಯಲ್ಲಿ ‘ಭೋಜನ ಬಂಡಿ... ಬನ್ನಿ ಕುಳಿತು ಊಟ ಮಾಡೋಣ’ ಎಂಬ ಘೋಷವಾಕ್ಯಗಳಿವೆ.

ಬಸ್‌ ಒಳಗಿನ ಸೀಟ್‌ಗಳನ್ನು ತೆಗೆದು ಟೇಬಲ್‌ ಮತ್ತು ಆಸನಗಳನ್ನು ಜೋಡಿಸಲಾಗಿದೆ. ಕೈತೊಳೆಯುವ ಬೇಸಿನ್‌, ಕುಡಿಯುವ ನೀರಿನ ವ್ಯವಸ್ಥೆ, ಫ್ಯಾನ್‌ಗಳ ವ್ಯವಸ್ಥೆ ಇದೆ. ಬೆಳಕಿಗಾಗಿ ಚಾವಣಿಯಲ್ಲಿ ಗಾಜಿನ ಕಿಟಕಿ ಇದೆ. ಗಾಳಿ, ಬೆಳಕಿಗಾಗಿ ಬಸ್ಸಿನ ಎರಡೂ ಬದಿಗಳಲ್ಲಿ ಕಿಟಕಿಗಳನ್ನು ಇಡಲಾಗಿದೆ. ಬಸ್‌ ಚಾವಣಿಯ ಮೇಲೆ ನೀರಿನ ಟ್ಯಾಂಕ್‌ ಜೋಡಿಸಲಾಗಿದೆ. ಹೋಟೆಲ್‌ಗಳಲ್ಲಿ ಇರುವ ಎಲ್ಲ ಸೌಲಭ್ಯಗಳೂ ‘ಭೋಜನ ಬಂಡಿ’ಯಲ್ಲಿವೆ.

17 ಡಿಪೊಗಳಿಗೆ ‘ಬಂಡಿ’: ನಗರದಲ್ಲಿ 49 ಬಿಎಂಟಿಸಿ ಡಿಪೊಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆಗಳಲ್ಲಿ ಕ್ಯಾಂಟೀನ್‌ಗಳಿವೆ. ಹಲವು ಕಡೆಗಳಲ್ಲಿ ಇಲ್ಲ. ಕಾರ್ಯಾಚರಣೆ ನಿಲ್ಲಿಸಿರುವ ಬಸ್‌ಗಳನ್ನು ಕ್ಯಾಂಟೀನ್‌ಗಳನ್ನಾಗಿ ಪರಿವರ್ತಿಸಿ 17 ಡಿಪೊಗಳಲ್ಲಿ ಅಳವಡಿಸುವ ಯೋಜನೆ ಇದೆ. ಸದ್ಯ ಒಂದು ಕ್ಯಾಂಟೀನ್‌ ತಯಾರಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬಿಎಂಟಿಸಿ ಸಿಬ್ಬಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ನೀಡಲು ಈ ಕ್ಯಾಂಟೀನ್‌ಗಳು ಬಳಕೆಯಾಗಲಿವೆ. ಕ್ಯಾಂಟೀನ್‌ ಅನ್ನು ಬಿಎಂಟಿಸಿ ವತಿಯಿಂದಲೇ ನಡೆಸುವ ಅಥವಾ ಹೊರಗೆ ಗುತ್ತಿಗೆ ನೀಡುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಎಂಟಿಸಿ ಬಸ್‌ ಅನ್ನು ಪರಿವರ್ತಿಸಿ ನಿರ್ಮಿಸಿರುವ ‘ಭೋಜನ ಬಂಡಿ’ಯನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ಅವರು ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ್ ತಾಂತ್ರಿಕ ಸಿಬ್ಬಂದಿಯೊಂದಿಗೆ ವೀಕ್ಷಿಸಿದರು

‘ಅತ್ಯುತ್ತಮ ಕ್ಯಾಂಟೀನ್‌’

ಬಿಎಂಟಿಸಿ ತಾಂತ್ರಿಕ ಎಂಜಿನಿಯರ್‌ಗಳು ಸಂಚಾರ ನಿಲ್ಲಿಸಿರುವ ಬಸ್‌ ಸಹಿತ ನಮ್ಮಲ್ಲಿರುವ ಸಂಪನ್ಮೂಲವನ್ನೇ ಬಳಸಿಕೊಂಡು ಅತ್ಯುತ್ತಮ ಕ್ಯಾಂಟೀನ್‌ ನಿರ್ಮಾಣ ಮಾಡಿದ್ದಾರೆ. ಈ ವಿನೂತನ ‘ಭೋಜನ ಬಂಡಿ’ಯನ್ನು ಅಗತ್ಯ ಇರುವಲ್ಲಿ ಅಳವಡಿಸಲಾಗುವುದು. ರಾಮಚಂದ್ರನ್ ಆರ್. ವ್ಯವಸ್ಥಾಪಕ ನಿರ್ದೇಶಕ ಬಿಎಂಟಿಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.