ADVERTISEMENT

ಇಲ್ಲಿಲ್ಲ ತಂಗುದಾಣ; ಫುಟ್‌ಪಾತ್‌ಗಳೇ ಆಶ್ರಯ ತಾಣ

ಸುಡು ಬಿಸಿಲಿನಲ್ಲೇ ಬಸ್ಸಿಗೆ ಕಾಯುವ ಪ್ರಯಾಣಿಕರು * ಎರಡು ವರ್ಷವದರೂ ಮುಗಿಯದ ಕಾಮಗಾರಿ

ಪ್ರಸನ್ನ ಕುಮಾರ ಪಿ.ಎನ್.
Published 25 ಮಾರ್ಚ್ 2019, 19:58 IST
Last Updated 25 ಮಾರ್ಚ್ 2019, 19:58 IST
ನಗರದ ಶೇಷಾದ್ರಿ ರಸ್ತೆಯ ಎಸ್.ಜೆ. ಪಾಲಿಟೆಕ್ನಿಕ್ ಕಾಲೇಜಿನ ಬಳಿ ರಸ್ತೆಯಲ್ಲೇ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು –ಪ್ರಜಾವಾಣಿ ಚಿತ್ರ
ನಗರದ ಶೇಷಾದ್ರಿ ರಸ್ತೆಯ ಎಸ್.ಜೆ. ಪಾಲಿಟೆಕ್ನಿಕ್ ಕಾಲೇಜಿನ ಬಳಿ ರಸ್ತೆಯಲ್ಲೇ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಬಿಎಂಪಿಯಿಂದ ಬಸ್‌ ತಂಗುದಾಣಗಳ ನಿರ್ಮಾಣ ಯೋಜನೆ ಎರಡೂವರೆ ವರ್ಷಗಳಿಂದಲೂ ಕುಂಟುತ್ತಾ ಸಾಗಿದ್ದರಿಂದ ನಿಲುಗಡೆ ತಾಣಗಳಲ್ಲಿ ಪ್ರಯಾಣಿಕರು ಬಿಸಿಲಿನಲ್ಲಿಯೇ ಬಸ್‌ಗಾಗಿ ಕಾಯುತ್ತಾ ನಿಲ್ಲುವುದು ಅನಿವಾರ್ಯವಾಗಿದೆ.

ನಗರದಲ್ಲಿ 8000ಕ್ಕೂ ಅಧಿಕ ಬಸ್‌ ನಿಲುಗಡೆ ತಾಣಗಳಿದ್ದರೆ, ಇದುವರೆಗೆ ಸಾವಿರ ಕಡೆಗಳಲ್ಲಿ ಮಾತ್ರ ತಂಗುದಾಣಗಳಿದ್ದವು. ಹೀಗಾಗಿ ಪ್ರಯಾಣಿಕರಿಗೆ ಸೌಕರ್ಯ ಕಲ್ಪಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) 2016ರ ಸೆಪ್ಟೆಂಬರ್‌ನಲ್ಲಿ 2,212 ತಂಗುದಾಣಗಳನ್ನು ನಿರ್ಮಿಸಲು ನಿರ್ಧರಿಸಿ, ಕಾರ್ಯಾದೇಶ ಹೊರಡಿಸಿತ್ತು. ಅದರಲ್ಲಿ ಇಲ್ಲಿಯತನಕ 671 ಬಸ್‌ ತಂಗುದಾಣಗಳು ಮಾತ್ರ ತಲೆ ಎತ್ತಿವೆ.

ವಿನ್ಯಾಸ, ನಿರ್ಮಾಣ, ನಿರ್ವಹಣೆ, ವರ್ಗಾವಣೆ (ಡಿಬಿಒಟಿ) ಆಧಾರದಲ್ಲಿ ತಂಗುದಾಣ ನಿರ್ಮಿಸಲು ಪಾಲಿಕೆ ಗುತ್ತಿಗೆ ನೀಡಿತ್ತು. ತಂಗುದಾಣ ನಿರ್ಮಿಸಿದ 20 ವರ್ಷದವರೆಗೂ ನೆಲಬಾಡಿಗೆ ಮತ್ತು ಜಾಹೀರಾತು ತೆರಿಗೆ (ವರ್ಷಕ್ಕೆ ₹ 45 ಸಾವಿರ) ಗುತ್ತಿಗೆದಾರರೇ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿತ್ತು.

ADVERTISEMENT

ಟೆಂಡರ್‌ ನೀಡಿ ಎರಡೂವರೆ ವರ್ಷಗಳಾಗಿದ್ದರೂ ಬಸ್‌ ತಂಗುದಾಣಗಳು ನಿರೀಕ್ಷಿತ ಪ್ರಮಾಣದಲ್ಲಿ ನಿರ್ಮಾಣ ಆಗದಿರುವುದಕ್ಕೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.‘ನಿತ್ಯ ಬಸ್‌ಗಾಗಿ ನಾನು ಅರ್ಧಗಂಟೆಯಾದರೂ ಕಾಯಬೇಕು. ಸಂಜೆಯ ಹೊತ್ತು ಹೆಚ್ಚಿನ ಸಮಯವನ್ನು ನಿಲುಗಡೆ ತಾಣದಲ್ಲೇ ಕಳೆಯಬೇಕಾಗುತ್ತದೆ. ನಿಲುಗಡೆ ಸ್ಥಳದಲ್ಲೊಂದು ತಂಗುದಾಣವೇನೋ ಇದೆ. ಆದರೆ, ಬೆಂಚು ತುಕ್ಕು ಹಿಡಿದಿದೆ. ಅಲ್ಲಿ ಕೂರಲೂ ಆಗುವುದಿಲ್ಲ’ ಎಂದು ವರ್ತುಲ ರಸ್ತೆಯ ಕಂಪನಿಯೊಂದರ ಉದ್ಯೋಗಿ ಎನ್‌.ಶ್ರೀನಿವಾಸ ಹೇಳುತ್ತಾರೆ.

ಬಸ್‌ ತಂಗುದಾಣದಲ್ಲಿ ಸ್ಕ್ರೀನ್‌ ಅಳವಡಿಸಿ ಮಾಹಿತಿಯನ್ನು ಬಿತ್ತರಿಸುವುದು ಕೂಡ ಮೂಲ ಯೋಜನೆಯಲ್ಲಿ ಸೇರಿತ್ತು. ‘ಸ್ಕ್ರೀನ್‌ ಸೇರಿದಂತೆ ಮಾಹಿತಿ ಬಿತ್ತರಿಸಲು ಬೇಕಾದ ಸಾಧನಗಳನ್ನು ಸುರಕ್ಷತೆಗೆ ವ್ಯವಸ್ಥೆ ಆಗಬೇಕು. ನಿರಂತರ ವಿದ್ಯುತ್‌ ಪೂರೈಕೆಯೂ ಇರಬೇಕು’ ಎಂದು ಬಿಎಂಟಿಸಿ ಅಧಿಕಾರಿಗಳು ಪ್ರತಿಕ್ರಿಯಿಸುತ್ತಾರೆ.

ಜಾಗದ ಕೊರತೆಯೇ ಹೆಚ್ಚು: ‘ತಂಗುದಾಣ ಕಟ್ಟಲು ಜಾಗದ ಕೊರತೆ ದೊಡ್ಡ ತಲೆ ನೋವಾಗಿದೆ. ರಸ್ತೆಯ ಪಕ್ಕದಲ್ಲಿ ಪಾಲಿಕೆಯ ಭೂಮಿ ಇಲ್ಲ. ಖಾಸಗಿ ಭೂಮಿ‌ ಇದ್ದರೂ ಅದರ ಮಾಲೀಕರು ಜಾಗ ನೀಡಲು ನಿರಾಕರಿಸುತ್ತಿದ್ದಾರೆ. ಕೆಲವೆಡೆ ಸ್ಥಳೀಯರೇ ಆಕ್ಷೇಪ ವ್ಯಕ್ತಪಡಿಸಿ ಇಲ್ಲಿ ನಿರ್ಮಿಸಬೇಡಿ ಎನ್ನುತ್ತಾರೆ. ಹೀಗಿರುವಾಗ ನಾವಾದರೂ ಏನು ಮಾಡಲು ಸಾಧ್ಯ?ಇಷ್ಟಾದರೂ ಕೆಲ ಮಾಲೀಕರ ಮನವೊಲಿಸಿದ್ದೇವೆ. ಮತ್ತೆ ಕೆಲವರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಯೊಬ್ಬರು ವಿವರಿಸುತ್ತಾರೆ.

‘ತಂಗುದಾಣಗಳು ಇಲ್ಲದೆ ಪ್ರಯಾಣಿಕರ ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯ 30ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಏರುತ್ತಿದ್ದು, ಧಗಧಗ ಉರಿಯುವ ಬಿಸಿಲಿನಲ್ಲೇ ಬಸ್ಸಿಗಾಗಿ ಕಾಯಬೇಕು. ಕೆಲವೆಡೆ ತಂಗುದಾಣ ಇಲ್ಲದ ಕಾರಣ, ಬಸ್ ಚಾಲಕರು ಮುಂದೆ ಅಥವಾ ಹಿಂದೆ ನಿಲ್ಲಿಸುತ್ತಾರೆ. ಅಂಗವಿಕಲರು, ವೃದ್ಧರಿಗೆ ಬಸ್ ಹತ್ತುವುದು–ಇಳಿಯುವುದೇ ದೊಡ್ಡ ಸಮಸ್ಯೆಯಾಗಿದೆ. ಎಷ್ಟೋ ಬಾರಿ ಮಳೆ ಸಿಲುಕಿ ಶಾಲಾ–ಕಾಲೇಜು ಮಕ್ಕಳ ಪುಸ್ತಕಗಳು ಒದ್ದೆಯಾಗಿರುವ ಉದಾಹರಣೆಗಳೂ ಇವೆ. ನೆರಳಲ್ಲಿ ನಿಲ್ಲೋಣ ಎಂದರೆ ಮರಗಳೂ ಇಲ್ಲ’ ಎಂದು ಸಮಸ್ಯೆಗಳನ್ನು ಬಿಚ್ಚಿಡುತ್ತಾರೆ ಪ್ರಯಾಣಿಕ ರಮೇಶ್.

ಸ್ವಚ್ಛತೆ ಮಾಯ: ‘ನಿರ್ಮಾಣವಾದ ತಂಗುದಾಣಗಳಲ್ಲಿ ತ್ಯಾಜ್ಯ ತುಂಬಿಕೊಂಡು ಸ್ವಚ್ಛತೆಗೆ ದೂರವಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಯಾವೊಂದು ಸೌಲಭ್ಯಗಳನ್ನು ಒದಗಿಸಿಲ್ಲ. ಹಳೆಯ ತಂಗುದಾಣಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ’ ಎಂದು ದೂರುತ್ತಾರೆ.

ಶೆಲ್ಟರ್‌ಗಳನ್ನು ನಿರ್ಮಿಸಿದರೆ ಸಾಲದು, ಆ ಸ್ಥಳದಲ್ಲಿ ಬಸ್‌ಗಳು ನಿಲ್ಲುವಂತೆ ನೋಡಿಕೊಳ್ಳುವುದು ಬಿಎಂಟಿಸಿ ಹೊಣೆಯಾಗಿದೆ. ಎಷ್ಟೋ ಚಾಲಕರು ಬಸ್‌ ನಿಲ್ಲಿಸದೆ ಹಾಗೇ ಹೋಗಿಬಿಡುತ್ತಾರೆ. ಆದ್ದರಿಂದಲೇ ಖಾಸಗಿ ವಾಹನಗಳ ಬಳಕೆದಾರರು ಬಸ್‌ಗಳತ್ತ ದೊಡ್ಡ ಪ್ರಮಾಣದಲ್ಲಿ ವಾಲುತ್ತಿಲ್ಲ ಎಂದು ಸಮೂಹಸಾರಿಗೆ ತಜ್ಞರು ವಿವರಿಸುತ್ತಾರೆ.

ಷರತ್ತು ಸಡಿಲಿಸಲು ಎಸ್ಸಿ, ಎಸ್ಟಿ ಗುತ್ತಿಗೆದಾರರ ಪಟ್ಟು

ಬಸ್‌ ತಂಗುದಾಣ ನಿರ್ಮಾಣ ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ‌ ಪಂಗಡದ ಗುತ್ತಿಗೆದಾರರಿಗೆ ಶೇ 25ರಷ್ಟು ಮೀಸಲಿಡಲಾಗಿದೆ. ಸಾಮಾನ್ಯ ವರ್ಗದ ಗುತ್ತಿಗೆದಾರಂತೆ ಅವರಿಗೂ ಷರತ್ತುಗಳನ್ನು ವಿಧಿಸಿರುವುದರಿಂದ ಎಸ್ಸಿ, ಎಸ್ಟಿ ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಷರತ್ತುಗಳನ್ನು ಸಡಿಲಿಸುವಂತೆ ಒತ್ತಾಯಿಸಿದ್ದಾರೆ.

‘ಈ ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆಯ ಮುಂದಿಟ್ಟಿದ್ದೆವು. ಅವು‌‌ಗಳನ್ನೇ ಮುಂದುವರಿಸುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ ಹಲವು ಬಾರಿ ಟೆಂಡರ್ ಕರೆದರೂ ಅವರು ಬಿಡ್‌ ಕೂಗಲು ಮುಂದಾಗಿಲ್ಲ. ಮೀಸಲಿಟ್ಟ ಕಾಮಗಾರಿಗಳು ಒಂದೂ ಆರಂಭವಾಗಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಮೆಟಲ್‌ ಫ್ಯಾಬ್ರಿಕೇಷನ್‌ನಲ್ಲಿ ಮತ್ತು ಬಸ್‌ ತಂಗುದಾಣ ನಿರ್ಮಾಣ ಕಾಮಗಾರಿಯಲ್ಲಿ ಐದು ವರ್ಷ ಕೆಲಸ ಮಾಡಿರುವ ಅನುಭವವುಳ್ಳ ಗುತ್ತಿಗೆದಾರರಿಗೆ ಮಾತ್ರ ಅವಕಾಶ ಎಂಬುದಾಗಿ ಷರತ್ತು ವಿಧಿಸಲಾಗಿದೆ. ಎಸ್ಸಿ, ಎಸ್ಟಿ ಗುತ್ತಿಗೆದಾರರು ಆ ಷರತ್ತುಗಳನ್ನು ಸಡಿಲಗೊಳಿಸುವಂತೆ ಪಾಲಿಕೆಗೆ ಮನವಿ ಮಾಡಿದ್ದರು.

‘ಅಧಿಕಾರಿಗಳೊಂದಿಗೆ ಚರ್ಚೆ’

‘ತಂಗುದಾಣಗಳ ನಿರ್ಮಾಣಕ್ಕೆ ಆಗಿರುವ ವಿಳಂಬದ ಕುರಿತು ವಿವರ ನೀಡುವಂತೆ ಆಯುಕ್ತ ಮಂಜುನಾಥ ಪ್ರಸಾದ್‌ ಅವರಿಗೆ ತಿಳಿಸಿದ್ದೇನೆ. ಚುನಾವಣಾ ಕಾರ್ಯದಲ್ಲಿ ನಿರತಾಗಿರುವ ಪರಿಣಾಮ ಅವರಿಂದ ಇನ್ನೂ ಉತ್ತರ ಸಿಕ್ಕಿಲ್ಲ. ವಿವರ ದೊರೆತ ಬಳಿಕ ಗುತ್ತಿಗೆದಾರರು ವಿಧಿಸಿದ ಷರತ್ತುಗಳು ಬಗ್ಗೆ ಅಧಿಕಾರಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸುತ್ತೇನೆ’ ಎನ್ನುತ್ತಾರೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌.

***

ಬ್ಯಾಟರಾಯನ‍ಪುರದ ನಿಲ್ದಾಣದಲ್ಲಿ ಮಳೆ ಬಂದರೆ ನೆನೆಯುತ್ತಾ, ನೆತ್ತಿ ಸುಡುವ ಬಿಸಿಲಿನಲ್ಲೇ ಬಸ್ಸಿಗೆ ಕಾಯಬೇಕು

–ಅಂಬರೀಷ್, ಪ್ರಯಾಣಿಕ

***

ಅಂಕಿ ಅಂಶ

2,212

ಬಸ್‌ ತಂಗುದಾಣ‌ ನಿರ್ಮಾಣಕ್ಕೆ ಪಾಲಿಕೆ ಹೊರಡಿಸಿರುವ ಆದೇಶ

1,541

ಬಾಕಿ ಉಳಿದ ತಂಗುದಾಣಗಳು

671

ನಿರ್ಮಾಣವಾದ ತಂಗುದಾಣಗಳು

550

ತಂಗುದಾಣ ನಿರ್ಮಾಣಕ್ಕೆ ಎಸ್ಸಿ, ಎಸ್ಟಿಗೆ ಗುತ್ತಿಗೆದಾರರಿಗೆ ಮೀಸಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.