ಬೆಂಗಳೂರು: ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಬಡಾವಣೆಯ ಖಾಲಿ ಪ್ರದೇಶದಲ್ಲಿ ಕಾರಿನ ಒಳಗೆ ಕುಳಿತು ಬೆಂಕಿಹಚ್ಚಿಕೊಂಡು ಹೋಟೆಲ್ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಗರಬಾವಿ ಎರಡನೇ ಹಂತದ 12ನೇ ಮುಖ್ಯರಸ್ತೆ ನಿವಾಸಿ, ಉದ್ಯಮಿ ಪ್ರದೀಪ್ (42) ಆತ್ಮಹತ್ಯೆ ಮಾಡಿಕೊಂಡವರು.
‘ಶನಿವಾರ ಮಧ್ಯಾಹ್ನದ ವೇಳೆ ತಮ್ಮ ಸ್ಕೋಡಾ ಕಾರಿನಲ್ಲಿ ಬಂದಿದ್ದ ಪ್ರದೀಪ್ ಕಾರಿನಲ್ಲಿ ಕುಳಿತು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ನಂತರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರು ಸಂಪೂರ್ಣ ಭಸ್ಮವಾಗಿದೆ. ಮೃತದೇಹವು ಗುರುತಿಸಲಾರದಷ್ಟು ಸುಟ್ಟು ಹೋಗಿತ್ತು. ಕಾರು ಸಂಚರಿಸಿದ್ದ ಮಾರ್ಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಗುರುತು ಪತ್ತೆ ಮಾಡಲಾಯಿತು’ ಎಂದು ಪೊಲೀಸರು ಹೇಳಿದರು.
ಆರ್ಥಿಕ ನಷ್ಟ: ಹೋಟೆಲ್ ಉದ್ಯಮದಲ್ಲಿ ಪ್ರದೀಪ್ ನಷ್ಟ ಅನುಭವಿಸಿದ್ದರು. ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಹೇಳಲಾಗಿದ್ದು, ನಿಖರ ಕಾರಣ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಮುದ್ದಿನಪಾಳ್ಯಕ್ಕೆ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಕೋಡಾ ಕಾರಿನಲ್ಲಿ ಪ್ರದೀಪ್ ಬಂದಿದ್ದರು. ಕೆಲ ಸಮಯ ಕಾರಿನಲ್ಲೇ ಕುಳಿತಿದ್ದರು. ಅದಾದ ಮೇಲೆ ಕಾರು ಹೊತ್ತಿ ಉರಿಯಲು ಆರಂಭಿಸಿತ್ತು. ಸಮೀಪದ ಮನೆಯವರು ಕಾರಿಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿ, ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ಬಂದಾಗ ಮಧ್ಯಾಹ್ನ 2.45 ಆಗಿತ್ತು. ಆ ವೇಳೆಗೆ ಕಾರು ಬಹುತೇಕ ಭಸ್ಮವಾಗಿತ್ತು. ಬೆಂಕಿ ನಂದಿಸಿದ ನಂತರ ಪರಿಶೀಲನೆ ನಡೆಸಿದಾಗ ಕಾರಿನ ಒಳಗೆ ಮೃತದೇಹ ಪತ್ತೆಯಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಪೆಟ್ರೋಲ್ ಖರೀದಿ: ಆತ್ಮಹತ್ಯೆ ಮಾಡಿ ಕೊಳ್ಳಲು ಉದ್ಯಮಿ ಪೆಟ್ರೋಲ್ ಖರೀದಿಸಿ ಬಾಟಲಿಯಲ್ಲಿ ತುಂಬಿಕೊಂಡು ಬಂದಿದ್ದರು ಎನ್ನಲಾಗಿದೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಘಟನೆಯ ಸಂಪೂರ್ಣ ದೃಶ್ಯ ಅಕ್ಕಪಕ್ಕದ ಮನೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದರು.
‘ದೆಹಲಿ ನೋಂದಣಿ ಸಂಖ್ಯೆಯ ಸ್ಕೋಡಾ ಕಾರನ್ನು ಪ್ರದೀಪ್ ಅವರು ಇತ್ತೀಚೆಗಷ್ಟೇ ಖರೀದಿಸಿದ್ದರು. ಮಾಲೀಕತ್ವ ಇನ್ನೂ ಬದಲಾವಣೆ ಆಗಿರಲಿಲ್ಲ’ ಎಂದು ಮೂಲಗಳು ಹೇಳಿವೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.