ADVERTISEMENT

ಉದ್ಯಮಿ ಸಿದ್ಧಾರ್ಥ ಕಥೆ ಬಿಂಬಿಸುವ ‘ಆನಂದ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 20:14 IST
Last Updated 16 ಜನವರಿ 2022, 20:14 IST
ವಿ.ಜಿ.ಸಿದ್ಧಾರ್ಥ
ವಿ.ಜಿ.ಸಿದ್ಧಾರ್ಥ   

ಬೆಂಗಳೂರು: ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ.ಸಿದ್ಧಾರ್ಥ ಅವರ ಜೀವನ ಕಥೆ ಹೋಲುವ ರೀತಿ ರಚಿಸಲಾಗಿರುವ ‘ಆನಂದ’ ಕೃತಿಯನ್ನು ಭಾನುವಾರ ವರ್ಚುವಲ್‌ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.

ಕ್ಯಾಪ್ಟನ್ ಸಹನಾ ಸುಂದರ್ ಹಾಗೂ ನೈಜಿರಿಯಾದ ಲೇಖಕ ಕೋಶಿ ಒಫೋರ್‌ಬೂಕ್‌ ವಿಸ್ಡಮ್ ಅವರು ರಚಿಸಿರುವ ಈ ಕೃತಿಯನ್ನು ಲೇಖಕ ಡಾ.ರಾಧಾಕೃಷ್ಣ ಪಿಳ್ಳೈ ಬಿಡುಗಡೆ ಮಾಡಿದರು.

‘ಕೃತಿಯಲ್ಲಿ ಬರಹ ಶೈಲಿ ಸರಳ ಮತ್ತು ವಿಭಿನ್ನವಾಗಿದೆ. ನಾಯಕನ ಪಾತ್ರ ಆನಂದನ ವ್ಯಕ್ತಿತ್ವವನ್ನು ಸುಂದರವಾಗಿ ಅನಾವರಣಗೊಳಿಸಲಾಗಿದೆ. ಕಾಫಿ ಉದ್ಯಮಿ ಸಿದ್ಧಾರ್ಥ ಅವರನ್ನು ನೇರವಾಗಿ ಈ ಪಾತ್ರವು ಹೋಲುತ್ತದೆ. ಅವರ ಘನತೆಯ ವ್ಯಕ್ತಿತ್ವವನ್ನು ಇಲ್ಲಿ ಬಿಂಬಿಸಲಾಗಿದೆ’ ಎಂದು ಡಾ. ರಾಧಾಕೃಷ್ಣ ಪಿಳೈ ವಿವರಿಸಿದರು.

ADVERTISEMENT

‘ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯು ಯಾವ ರೀತಿಯ ಪಾತ್ರವಹಿಸುತ್ತಾರೆ ಎನ್ನುವುದನ್ನೂ ವಿವರಿಸಲಾಗಿದೆ. ಇದೇ ರೀತಿ ಕೃತಿಯಲ್ಲಿನ ಪ್ರತಿಯೊಂದು ಪಾತ್ರವು ಗೌರವ ಬಯಸುತ್ತದೆ’ ಎಂದು ವಿಶ್ಲೇಷಿಸಿದರು.

ಸಿದ್ಧಾರ್ಥ ಅವರ ಜತೆ ಹಲವು ವರ್ಷ ಕಾರ್ಯನಿರ್ವಹಿಸಿರುವ ಹಾಗೂ ಆಪ್ತರಾಗಿದ್ದ ಟ್ಯಾಂಗ್ಲಿನ್‌ ಡೆವಲಪ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಶಂಕರ್‌ ವೆಂಕಟರಮನ್‌ ಅವರು, ‘ಸಿದ್ಧಾರ್ಥ ಅವರ ನಿಜ ವ್ಯಕ್ತಿತ್ವವನ್ನು ಯೋಗ್ಯ ರೀತಿಯಲ್ಲಿ ಕೃತಿಯಲ್ಲಿ ಬಿಂಬಿಸಲಾಗಿದೆ. ಪ್ರತಿಭೆ ಇರುವ ವ್ಯಕ್ತಿಗಳನ್ನು ಸಿದ್ಧಾರ್ಥ ಗುರುತಿಸುತ್ತಿದ್ದರು. ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಪರಿವರ್ತಿಸಿದರು. ಕಾಫಿ ಕುರಿತು ಅವರ ಕಂಡ ಕನಸುಗಳನ್ನು ನನಾಗಿಸಿಕೊಂಡರು‘ ಎಂದು ವಿವರಿಸಿದರು.

’1996ರಲ್ಲಿ ಕಾಫಿ ಡೇ ಆರಂಭವಾಯಿತು. ಆರಂಭದಲ್ಲಿ ಎಂಟು ಕಿಲೋ ಮೀಟರ್‌ ವ್ಯಾಪ್ತಿ ಒಳಗೆ ಒಂದು ಕಾಫಿ ಡೇ ಇರುತ್ತಿತ್ತು. ನಂತರ, ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಎಂಟು ಕಾಫಿ ಡೇಗಳನ್ನು ಆರಂಭಿಸಲಾಯಿತು. ಇದು ಅವರ ಯಶೋಗಾಥೆ. ವೈಫಲ್ಯಗಳ ಬಗ್ಗೆ ಗಮನಹರಿಸಬೇಡಿ. ಪ್ರಯತ್ನಗಳನ್ನು ಕೈಬಿಡಬೇಡಿ ಎಂದು ಹೇಳುತ್ತಿದ್ದರು. ಎಲ್ಲರನ್ನೂ ಸಮನವಾಗಿ ಕಾಣುತ್ತಿದ್ದರು’ ಎಂದು ನೆನಪಿಸಿಕೊಂಡರು.

ಕ್ಯಾಪ್ಟನ್ ಸಹನಾ ಸುಂದರ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌. ಸುರೇಶ್, ಪತ್ರಕರ್ತೆ ವಾಸಂತಿ ಹರಿಪ್ರಕಾಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.