ADVERTISEMENT

ಕದ್ದ ಒಡವೆ ಖರೀದಿ: ತುಮಕೂರು ಪೊಲೀಸರಿಂದ ಅಟ್ಟಿಕಾ ಗೋಲ್ಡ್ ಕಂಪನಿಯ ಬಾಬು ಬಂಧನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 20:03 IST
Last Updated 26 ಜೂನ್ 2024, 20:03 IST
ಅಟ್ಟಿಕಾ ಬಾಬು
ಅಟ್ಟಿಕಾ ಬಾಬು   

ತುಮಕೂರು: ಕದ್ದ ಚಿನ್ನಾಭರಣ ಖರೀದಿಸಿದ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್ ಕಂಪನಿಯ ನಿರ್ದೇಶಕ ಅಟ್ಟಿಕಾ ಬಾಬು ಅಲಿಯಾಸ್‌ ಪಿ.ಎಸ್.ಅಯ್ಯೂಬ್‌ (44) ಅವರನ್ನು ಜಿಲ್ಲೆಯ ಪೊಲೀಸರು ಬೆಂಗಳೂರಿನಲ್ಲಿ ಬುಧವಾರ ಸಂಜೆ ಬಂಧಿಸಿದ್ದಾರೆ.

ತುರುವೇಕೆರೆ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಆನೇಕಲ್ ತಾಲ್ಲೂಕಿನ ಜಿಗಣಿಯ ನಿವಾಸಿ ಉದಯ್‌ ಅಲಿಯಾಸ್‌ ಅಶೋಕ್‌ (30) ಎಂಬಾತನನ್ನು ತಿಂಗಳ ಹಿಂದೆ ಬಂಧಿಸಲಾಗಿತ್ತು. ವಿವಿಧ ಕಡೆ ಕದ್ದ ಆಭರಣಗಳನ್ನು ಉದಯ್‌ ತನ್ನ ಹೆಂಡತಿ ಮೂಲಕ ಅಟ್ಟಿಕಾ ಗೋಲ್ಡ್ ಕಂಪನಿ ಮಳಿಗೆಗೆ ಮಾರಾಟ ಮಾಡಿಸುತ್ತಿದ್ದ.

ತುರುವೇಕೆರೆ ಪೊಲೀಸರು ಉದಯ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಟ್ಟಿಕಾ ಗೋಲ್ಡ್ ಕಂಪನಿ ವ್ಯವಸ್ಥಾಪಕ ಹರೀಶ್‌ ಹೆಸರು ಹೊರ ಬಂದಿತ್ತು. ಹರೀಶ್‌ ವಿಚಾರಣೆ ನಡೆಸಿದಾಗ ಅಟ್ಟಿಕಾ ಬಾಬು ಹೆಸರು ಹೊರಬಂತು.

ADVERTISEMENT

ಬೆಂಗಳೂರಿಗೆ ತೆರಳಿದ ತುರುವೇಕೆರೆ ಠಾಣೆಯ ಸಿಪಿಐ ಬಿ.ಎನ್‌.ಲೋಹಿತ್‌ ನೇತೃತ್ವದ ತಂಡ ಫ್ರೇಜರ್‌ ಟೌನ್‌ನ ಮರಿಯಮ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ಮನೆ ಬಳಿಯೇ ಬಾಬು ಬಂಧಿಸಿ ಕರೆ ತಂದಿದೆ.

ಉದಯ್‌ ವಿರುದ್ಧ ತುಮಕೂರು, ಮಂಡ್ಯ, ರಾಮನಗರ ಜಿಲ್ಲೆ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ 13 ಕಳ್ಳತನ ಪ್ರಕರಣ ದಾಖಲಾಗಿವೆ. ಎಲ್ಲ ಕಡೆ ಕಳವು ಮಾಡಿದ ಆಭರಣಗಳನ್ನು ಅಟ್ಟಿಕಾ ಗೋಲ್ಡ್‌ ಕಂಪನಿಗೆ ಮಾರಾಟ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಆರೋಪಿಯನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಅಟ್ಟಿಕಾ ಬಾಬು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್, ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದರು. ಟಿಕೆಟ್‌ ಸಿಗದೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.