ADVERTISEMENT

BWSSBಗೆ ‘ಸಿಐಐ ಐಜಿಬಿಸಿ ಗ್ರೀನ್‌ ಪ್ರಾಜೆಕ್ಟ್‌’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 18:05 IST
Last Updated 14 ನವೆಂಬರ್ 2024, 18:05 IST
ಗ್ರೀನ್‌ ಎಕ್ಸ್‌ಪೊ ಗ್ರೀನ್‌ ಬಿಲ್ಡಿಂಗ್‌ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಸಿಐಐ ಐಜಿಬಿಸಿಯ ಶೇಖರ್‌ ರೆಡ್ಡಿ ಹಾಗೂ ಗುರ್‌ಮೀತ್‌ ಸಿಂಗ್‌ ಅರೋರ ಅವರು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು
ಗ್ರೀನ್‌ ಎಕ್ಸ್‌ಪೊ ಗ್ರೀನ್‌ ಬಿಲ್ಡಿಂಗ್‌ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಸಿಐಐ ಐಜಿಬಿಸಿಯ ಶೇಖರ್‌ ರೆಡ್ಡಿ ಹಾಗೂ ಗುರ್‌ಮೀತ್‌ ಸಿಂಗ್‌ ಅರೋರ ಅವರು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು   

ಬೆಂಗಳೂರು: ನೀರಿನ ಬಳಕೆ ಮತ್ತು ನಿರ್ವಹಣೆಯಲ್ಲಿ ಸುಸ್ಥಿರ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಸಮರ್ಥವಾಗಿ ನಿಭಾಯಿಸಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ‘ಸಿಐಐ ಐಜಿಬಿಸಿ ಗ್ರೀನ್‌ ಪ್ರಾಜೆಕ್ಟ್‌–2024’ ಪ್ರಶಸ್ತಿ ಲಭಿಸಿದೆ.

ನಗರದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆದ ‘ಗ್ರೀನ್‌ ಎಕ್ಸ್‌ಪೊ ಗ್ರೀನ್‌ ಬಿಲ್ಡಿಂಗ್‌ ಕಾಂಗ್ರೆಸ್‌’ ಕಾರ್ಯಕ್ರಮದಲ್ಲಿ ಸಿಐಐ ಐಜಿಬಿಸಿಯ ಶೇಖರ್ ರೆಡ್ಡಿ ಹಾಗೂ ಗುರ್‌ಮೀತ್‌ ಸಿಂಗ್‌ ಅರೋರ ಅವರು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ರಾಮ್‌ಪ್ರಸಾತ್‌ ಮನೋಹರ್‌ ಮಾತನಾಡಿ, ‘ಬೆಂಗಳೂರಿನಲ್ಲಿ ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿತ್ತು. ಅಂತರ್ಜಲ ಕುಸಿತದಿಂದ ನೀರಿನ ಕೊರತೆ ಉಂಟಾಗಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಾರ್ಗದರ್ಶನದಲ್ಲಿ ಹಲವಾರು ಸುಸ್ಥಿರ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಯಿತು. ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಲು ಏರಿಯೇಟರ್‌ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಯಿತು’ ಎಂದು ಹೇಳಿದರು. 

ADVERTISEMENT

‘ನೀರಿನ ಉಳಿತಾಯ ಮಾಡುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚಿಸುವುದು, ಇಂಗುಗುಂಡಿಗಳಲ್ಲಿ ಮಳೆ ನೀರು ಸಂಗ್ರಹಿಸುವುದು, ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರಿಗೆ ಹಾಗೂ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡಿ ನೀರಿನ ಮಹತ್ವವನ್ನು ತಿಳಿಸಲಾಯಿತು. ಇದರಿಂದ ಬೇಸಿಗೆಯಲ್ಲಿ ನೀರಿನ ಬವಣೆಯನ್ನು ನಿಭಾಯಿಸುವಲ್ಲಿ ನಮ್ಮ ಜಲಮಂಡಳಿ ಯಶಸ್ವಿಯಾಯಿತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.