ADVERTISEMENT

ಸಚಿವರ ಕಚೇರಿಯಿಂದ ₹20 ಲಕ್ಷ ನೀರಿನ ಶುಲ್ಕ ಬಾಕಿ

₹52 ಲಕ್ಷ ಬಾಕಿ ಉಳಿಸಿಕೊಂಡಿರುವ ಬೆಂಗಳೂರು ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 18:47 IST
Last Updated 10 ಫೆಬ್ರುವರಿ 2021, 18:47 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಬೆಂಗಳೂರು: ಜಲಮಂಡಳಿಗೆ ಅತಿಹೆಚ್ಚು ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ಕಚೇರಿ ಹಾಗೂ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಕಚೇರಿಯ ಹೆಸರೂ ಇವೆ.

ಈ ಎರಡು ಕಚೇರಿಗಳಿಂದ ಕ್ರಮವಾಗಿ ₹10.66 ಲಕ್ಷ ಹಾಗೂ ₹9.28 ಲಕ್ಷ ಶುಲ್ಕ ಕಟ್ಟಬೇಕಿದೆ. ಇದಲ್ಲದೆ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಅತಿ ಹೆಚ್ಚು ಅಂದರೆ, ₹52.78 ಲಕ್ಷ ಬಾಕಿ ಉಳಿಸಿಕೊಂಡಿದೆ ಎಂದು ಜಲಮಂಡಳಿ ಮೂಲಗಳು ಹೇಳಿವೆ.

ಶೆಟ್ಟರ್ ಅವರ ಕಚೇರಿಯಿಂದ (ಆರ್‌ಆರ್‌ ಸಂಖ್ಯೆ 149249) ಒಟ್ಟು ₹15.85 ಲಕ್ಷ ಶುಲ್ಕ ಪಾವತಿಸಬೇಕಾಗಿದ್ದು, ಇದರಲ್ಲಿ ₹10.66 ಲಕ್ಷ ಹಿಂದಿನ ಬಾಕಿ ಇದ್ದರೆ, ರಾಮುಲು ಅವರ ಕಚೇರಿಯಿಂದ (ಆರ್ ಆರ್ ಸಂಖ್ಯೆ ಸಿ101317) ಒಟ್ಟು ₹11.69 ಲಕ್ಷ ಶುಲ್ಕ ಪಾವತಿಸಬೇಕಾಗಿದೆ. ಈ ಪೈಕಿ 9.28 ಲಕ್ಷ ಹಿಂದಿನ ಬಾಕಿ ಇದೆ.

ADVERTISEMENT

ಬಿಬಿಎಂಪಿಯ ವಿವಿಧ ವಿಭಾಗಗಳಲ್ಲಿ ₹1 ಕೋಟಿಗೆ ಹೆಚ್ಚು ಶುಲ್ಕ ಜಲಮಂಡಳಿಗೆ ಬರಬೇಕಾಗಿದೆ. ಸ್ವಾಯತ್ತ ಸಂಸ್ಥೆಗಳ ಪೈಕಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಅತಿ ಹೆಚ್ಚು ಅಂದರೆ, ₹52.78 ಲಕ್ಷ ಬಾಕಿ ಉಳಿಸಿಕೊಂಡಿದೆ. ಶಾಸಕರ ಭವನದಿಂದಲೂ ₹35.16 ಲಕ್ಷ ನೀರಿನ ಬಾಕಿ ಶುಲ್ಕ ಜಲಮಂಡಳಿಗೆ ಬರಬೇಕಾಗಿದೆ.

ಸಚಿವರ ಹೆಸರಿನಲ್ಲಿ ಸಂಪರ್ಕ ಇಲ್ಲ:

‘ಜಗದೀಶ ಶೆಟ್ಟರ್‌ ಅಥವಾ ಶ್ರೀರಾಮುಲು ಅವರ ಹೆಸರಿನಲ್ಲಿ ಯಾರೂ ಜಲಮಂಡಳಿಯಿಂದ ಸಂಪರ್ಕ ಪಡೆದಿಲ್ಲ. ನೀರಿನ ಶುಲ್ಕ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಅವರ ಹೆಸರು ಹೇಳುವುದು ಸರಿಯಲ್ಲ’ ಎಂದು ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದ ಕಚೇರಿ ಅಥವಾ ಸಂಸ್ಥೆಯು ಶುಲ್ಕ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಸೇರಿಸಲಾಗದು. ಈ ಸಚಿವರು ಅವರ ವೈಯಕ್ತಿಕ ಉದ್ದೇಶಕ್ಕೆ ಅಥವಾ ಮನೆಗೆ ಸಂಪರ್ಕ ಪಡೆದು ಬಾಕಿ ಉಳಿಸಿಕೊಂಡಿದ್ದರೆ ಈ ಪಟ್ಟಿಯಲ್ಲಿ ಹೆಸರಿಸಬಹುದಿತ್ತು. ಆದರೆ, ಸರ್ಕಾರಿ ಕಚೇರಿಯಿಂದ ಶುಲ್ಕ ಪಾವತಿಯಾಗಬೇಕಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ಮಂಡಳಿಗೆ ಈ ಹಣ ಪಾವತಿಯಾಗುತ್ತದೆ. ಸರ್ಕಾರದ ಸಂಸ್ಥೆಗಳೇ ಆಗಿರುವುದರಿಂದ ಸ್ವಲ್ಪ ವಿಳಂಬವಾದರೂ ಬಾಕಿ ಹಣ ಬಂದೇ ಬರುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಸ್ವಾಯತ್ತ ಸಂಸ್ಥೆಯಾಗಿರುವ ಕೇಂದ್ರ ವಿಶ್ವವಿದ್ಯಾಲಯವು ₹50 ಲಕ್ಷಕ್ಕೂ ಹೆಚ್ಚು ಬಾಕಿ ಉಳಿಸಿಕೊಂಡಿದೆ. ಹಣ ಪಾವತಿಸುವಂತೆ ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯಲಾಗುವುದು. ಮುಂದೆಯೂ ಗಡುವಿನೊಳಗೆ ಶುಲ್ಕ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸುವ ಕ್ರಮ ಕೈಗೊಳ್ಳಲಾಗುತ್ತದೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.