ADVERTISEMENT

ನೀರು ಪೂರೈಕೆಯಲ್ಲಿ ವ್ಯತ್ಯಾಸವಾದರೆ ಕ್ರಮ: ಪರಮೇಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 19:40 IST
Last Updated 9 ಜುಲೈ 2024, 19:40 IST
ಬಾಗಲಗುಂಟೆ ವಾರ್ಡ್‌ನ ಜಲಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಎಸ್. ಮುನಿರಾಜು, ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ ಅವರು ವಾಲ್‌ಮ್ಯಾನ್‌ಗಳೊಂದಿಗೆ ಮಾತನಾಡಿದರು.
ಬಾಗಲಗುಂಟೆ ವಾರ್ಡ್‌ನ ಜಲಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಎಸ್. ಮುನಿರಾಜು, ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ ಅವರು ವಾಲ್‌ಮ್ಯಾನ್‌ಗಳೊಂದಿಗೆ ಮಾತನಾಡಿದರು.   

ಪೀಣ್ಯದಾಸರಹಳ್ಳಿ: ‘ಮನೆಗಳಿಗೆ ನೀರು ಪೂರೈಸುವಲ್ಲಿ ತಾರತಮ್ಯ ಮಾಡಿದರೆ, ಸಂಬಂಧಿಸಿದ ವಾಲ್‌ಮ್ಯಾನ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರು ಜಲಮಂಡಳಿ ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ ಎಚ್ಚರಿಸಿದರು.

ಬಾಗಲಗುಂಟೆ ವಾರ್ಡ್‌ನ ಬಿಡಬ್ಲ್ಯುಎಸ್‌ಎಸ್‌ಬಿ ಕಚೇರಿಯಲ್ಲಿ ನಡೆದ ಅಧಿಕಾರಿಗಳು ಹಾಗೂ ವಾಲ್‌ಮ್ಯಾನ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನಾಗರಿಕರೊಂದಿಗೆ ಸಂಘರ್ಷಕ್ಕೆ ಇಳಿಯದೇ ತಾಳ್ಮೆಯಿಂದ ವರ್ತಿಸಿ. ನಿಮ್ಮ ವ್ಯಾಪ್ತಿಯಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಜೊತೆ ನಾವಿದ್ದೇವೆ’ ಎಂದು ವಾಲ್‌ಮ್ಯಾನ್‌ಗಳಿಗೆ ಸಲಹೆ ನೀಡಿದರು.

ADVERTISEMENT

ಶಾಸಕ ಎಸ್.ಮುನಿರಾಜು ಮಾತನಾಡಿ, ‘ಪ್ರತಿ ನಿತ್ಯ ಕ್ಷೇತ್ರದ ಸಮಸ್ಯೆಗಳಲ್ಲಿ ನೀರು ಪೂರೈಕೆಯಲ್ಲಾಗುತ್ತಿರುವ ವ್ಯತ್ಯಾಸಗಳ ಬಗ್ಗೆಯೇ ಹೆಚ್ಚು ದೂರುಗಳಿರುತ್ತವೆ. ಸರಿಯಾದ ಸಮಯಕ್ಕೆ ನೀರು ಬರುವುದಿಲ್ಲ, ಅಲ್ಪಪ್ರಮಾಣದಲ್ಲಿ ನೀರು ಬಿಡುತ್ತಾರೆ, ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ವಾಲ್‌ಮ್ಯಾನ್‌ಗಳ ವಿರುದ್ಧ ದೂರು ಹೇಳುತ್ತಾರೆ. ಇನ್ನು ಮುಂದೆ ಇಂಥ ದೂರುಗಳು ಬರದಂತೆ ಎಚ್ಚರವಹಿಸಿ. ದೂರುಗಳು ಬಂದರೆ, ಈಗಿರುವ ವಾಲ್‌ಮ್ಯಾನ್‌ಗಳ ಬದಲಿಗೆ ಬೇರೆಯವರನ್ನು ನೇಮಕ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಲಮಂಡಳಿಯ ಹೆಚ್ಚುವರಿ ಮುಖ್ಯ ಎಂಜಿನಿಯರ್ ಬಿ.ಎಸ್. ದಲಾಯತ್, ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಮಿರಗಂಜಿ ಮಂಜುನಾಥ್, ಹರಿನಾಥ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜು ಕೆ.ಬಿ, ಸಹಾಯಕ ಎಂಜಿನಿಯರ್‌ಗಳಾದ ಕಾರ್ತಿಕ್, ಕೀರ್ತನ ಮತ್ತು ವಾಲ್‌ಮ್ಯಾನ್‌ಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.