ADVERTISEMENT

ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ: ಕಮಿಷನ್‌ ಆರೋಪಕ್ಕೆ ವಿಜಯೇಂದ್ರ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2024, 6:38 IST
Last Updated 9 ಫೆಬ್ರುವರಿ 2024, 6:38 IST
<div class="paragraphs"><p>ಬಿ.ವೈ. ವಿಜಯೇಂದ್ರ </p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: ಶೇ 40ರಷ್ಟು ಕಮಿಷನ್‌ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮುಂದುವರಿದಿದೆ ಎಂಬ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾಡಿರುವ ಆರೋಪವನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.‌

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು ‘ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ' ಎಂಬ ಗಾದೆ ಮಾತು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಷರಶಃ ಅನ್ವಯಿಸುತ್ತದೆ ಎಂದಿದ್ದಾರೆ.

ADVERTISEMENT

ಬಿಜೆಪಿ ಸರ್ಕಾರದ ಕಾಲದಲ್ಲಿ ಇದೇ ಕೆಂಪಣ್ಣನವರು ಕಮಿಷನ್ ಆರೋಪದ ಗದ್ದಲ ಎಬ್ಬಿಸಿದ್ದರು. ಕಾಂಗ್ರೆಸ್ಸಿಗರು ಅದನ್ನು ಬಂಡವಾಳ ಮಾಡಿಕೊಂಡು ಸತ್ಯಹರಿಶ್ಚಂದ್ರರಂತೆ ಕೂಗಾಡಿದ್ದರು. ಆದರೆ ಈಗ ಸಾಕ್ಷಿ ಸಮೇತ ಶೇ 40 ಕಮಿಷನ್ ಆರೋಪ ಮಾಡುತ್ತಿದ್ದಾರೆ. ವಾಸ್ತವವಾಗಿ ಶೇ 80ರವರೆಗೂ ಕಮಿಷನ್ ದಂಧೆ ಈ ಕಾಂಗ್ರೆಸ್ ಸರ್ಕಾರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ಸತ್ಯ ಏನೆಂಬುದು ಜನರಿಗೆ ಮನವರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಮಾನ್ಯ ಕೆಂಪಣ್ಣನವರು ತಾವೇ ಹೇಳಿರುವಂತೆ ಕಮಿಷನ್ ವಸೂಲಿಗೆ ನಿಯುಕ್ತಿಯಾಗಿರುವ ಅಧಿಕಾರಗಳ ವಿವರವನ್ನು ಧೈರ್ಯವಾಗಿ ಬಹಿರಂಗಪಡಿಸಲಿ. ಆಗ ಅದರ ಹಿಂದಿರುವ ಮುಖ್ಯ, ಉಪ ಮುಖ್ಯ ಸೂತ್ರಧಾರಿಗಳ ನೈಜ ಮುಖವಾಡ ಕಳಚುತ್ತದೆ ಎಂದು ಸವಾಲು ಹಾಕಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲೂ ಶೇ 40ರಷ್ಟು ಕಮಿಷನ್‌:

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೆಂಪಣ್ಣ ಅವರು ‘ಶೇ 40ರಷ್ಟು ಕಮಿಷನ್‌ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮುಂದುವರಿದಿದೆ. ಬಿಜೆಪಿ  ನೇತೃತ್ವದ ಹಿಂದಿನ ಸರ್ಕಾರದಲ್ಲಿ ಶಾಸಕರೇ ನೇರವಾಗಿ ಕಮಿಷನ್‌ ಪಡೆಯುತ್ತಿದ್ದರು. ಈಗ ಅಧಿಕಾರಿಗಳ ಮೂಲಕ ಕಮಿಷನ್‌ ಸಂಗ್ರಹಿಸಲಾಗುತ್ತಿದೆ’ ಆರೋಪಿಸಿದ್ದರು.

‘ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಬಹುತೇಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಚಿವರು, ಶಾಸಕರಿಗೆ ನೀಡಬೇಕು ಎಂದು ಗುತ್ತಿಗೆ ದಾರರಿಂದ ಕಮಿಷನ್‌ ವಸೂಲಿ ಮಾಡುತ್ತಿದ್ದಾರೆ’ ಎಂದು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.