ADVERTISEMENT

Interview| ಬ್ಯಾಟರಾಯನಪುರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

ಸಚ್ಚಿದಾನಂದ ಕುರಗುಂದ
Published 2 ಮೇ 2023, 22:18 IST
Last Updated 2 ಮೇ 2023, 22:18 IST
   

ಅಭಿವೃದ್ಧಿ ಕಾರ್ಯಗಳು, ಸಚ್ಛಾರಿತ್ರ್ಯ ವ್ಯಕ್ತಿತ್ವವೇ ಶ್ರೀರಕ್ಷೆ: ಕೃಷ್ಣ ಬೈರೇಗೌಡ (ಕಾಂಗ್ರೆಸ್‌)

ನೀವು ಏನು ಕೆಲಸ ಮಾಡುತ್ತೀರಿ ಎಂಬ ಕಾರಣಕ್ಕೆ ಜನರು ನಿಮಗೆ ಮತ ನೀಡಬೇಕು?

ಬ್ಯಾಟರಾಯನಪುರ ಕ್ಷೇತ್ರವು ಬೆಂಗಳೂರು ವ್ಯಾಪ್ತಿಯಲ್ಲಿದ್ದರೂ ಮೂಲಸೌಕರ್ಯಗಳು ಇಲ್ಲದೆಯೇ ಬಹಳ ಹಿಂದುಳಿದಿತ್ತು. ನಾನು ಶಾಸಕನಾದ ನಂತರ ಈ ಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿದ್ದೇನೆ. ಈಗ ಬೆಂಗಳೂರು ಮಹಾನಗರಕ್ಕೆ ಸರಿಸಮಾನವಾದ ಮತ್ತು ಅಗತ್ಯವಿರುವಷ್ಟು ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ರಸ್ತೆ, ಕೆರೆಗಳು, ಉದ್ಯಾನಗಳಿಗೆ ಕಾಯಕಲ್ಪ ನೀಡುವುದು ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಕ್ಷೇತ್ರದ ಜನತೆಯ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಜತೆಗೆ, ನನ್ನ ಸಚ್ಛಾರಿತ್ರ್ಯ ಮತ್ತು ಸಾರ್ವಜನಿಕ ಜೀವನದಲ್ಲಿ ಶಾಸಕ, ಮಂತ್ರಿಯಾಗಿ ಸೈ ಎನಿಸಿಕೊಂಡಿದ್ದೇನೆ. ಶುದ್ಧ ಹಸ್ತದಿಂದ ಬದುಕಿ, ನನ್ನದೇ ಆದ ಗೌರವ ಉಳಿಸಿಕೊಂಡಿದ್ದೇನೆ. ಅಭಿವೃದ್ಧಿ ಕಾರ್ಯಗಳು ಮತ್ತು ವ್ಯಕ್ತಿತ್ವದ ಮೂಲಕ ಶಾಸಕ ಸ್ಥಾನಕ್ಕೆ ಘನತೆ, ಗೌರವ ತಂದಿದ್ದೇನೆ.

ಗೆಲುವಿನ ವಿಶ್ವಾಸ ಮೂಡಿಸುವ ಜನ ಬೆಂಬಲ ಇದೆಯೇ?

ADVERTISEMENT

ಖಂಡಿತ. ಅಪಾರ ಜನ ಬೆಂಬಲ ದೊರೆತಿದೆ. ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಕಲ್ಪಿಸಲು ಜನ ಬಯಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ, ಲೂಟಿ ನಡೆದಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಆಡಳಿತ ಸಂಪೂರ್ಣ ಹಳಿ ತಪ್ಪಿರುವುದರಿಂದ ಬಿಜೆಪಿ ಬಗ್ಗೆ ಜನ ಬೇಸತ್ತಿದ್ದಾರೆ.  ಹೀಗಾಗಿ, ಈ ಬಾರಿ ಬಿಜೆಪಿ ಬೇಡ ಎನ್ನುವುದೇ ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌. ಸುಭದ್ರ ಸರ್ಕಾರ ಜನರಿಗೆ ಬೇಕಾಗಿರುವುದರಿಂದ ಕಾಂಗ್ರೆಸ್‌ಗೆ ಬೆಂಬಲ ನೀಡುವುದು ನಿಶ್ಚಿತ. ನನಗೆ ಪೂರಕವಾದ ಎಲ್ಲ ರೀತಿಯ ವಾತಾವರಣ ಸೃಷ್ಟಿಯಾಗಿದೆ.

ನಿಮ್ಮ ಎದುರಾಳಿ ಯಾರು?

ಬಿಜೆಪಿಯೇ ಎದುರಾಳಿ.

ಬ್ಯಾಟರಾಯನಪುರ

ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ: ಎಚ್‌.ಸಿ. ತಮ್ಮೇಶಗೌಡ (ಬಿಜೆಪಿ)

ಎಚ್‌.ಸಿ. ತಮ್ಮೇಶಗೌಡ

ನೀವು ಏನು ಕೆಲಸ ಮಾಡುತ್ತೀರಿ ಎಂಬ ಕಾರಣಕ್ಕೆ ಜನರು ನಿಮಗೆ ಮತ ನೀಡಬೇಕು?

ಕಳೆದ 15 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಕುಂಠಿತಗೊಂಡಿವೆ. ಕ್ಷೇತ್ರವು ಅತಿ ಹಿಂದುಳಿದಿದ್ದು ಬಡವರಿಗೆ ಹಕ್ಕುಪತ್ರಗಳನ್ನು ಸಹ ನೀಡಿಲ್ಲ. ಕ್ಷೇತ್ರದಲ್ಲಿ ಒಂಬತ್ತು ಲಕ್ಷ ಜನಸಂಖ್ಯೆ ಇದ್ದರೂ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಪದವಿ ಕಾಲೇಜು ಸಹ ಇಲ್ಲ. ಉತ್ತಮ ಕ್ರೀಡಾಂಗಣ ಮತ್ತು ರಸ್ತೆಗಳು ಇಲ್ಲ. ಚರಂಡಿ ಬೀದಿದೀಪಗಳು ಮುಂತಾದ ಯಾವುದೇ ರೀತಿಯ ಮೂಲಸೌಕರ್ಯಗಳು ಇಲ್ಲ. ಇದುವರೆಗೆ ಸರ್ಕಾರಿ ಆಸ್ಪತ್ರೆ ಅಥವಾ ಕಾಲೇಜು ಏಕೆ ನಿರ್ಮಿಸಿಲ್ಲ? ಹಾಲಿ ಶಾಸಕರ ವರ್ತನೆಯಿಂದ ಜನ ಬದಲಾವಣೆ ಬಯಸಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ಕಚೇರಿಯೂ ಇಲ್ಲ. ಹಾಲಿ ಶಾಸಕರು ವಿಶೇಷ ಅಲೋಚನೆಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಹೊಸ ಮೇಲ್ಸುತುವೆಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿಲ್ಲ. ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನು ಮಾಡುವ ಆಶಯವನ್ನು ನಾನು ಹೊಂದಿದ್ದೇನೆ. ಯಾವುದೇ ವ್ಯವಹಾರ ಮಾಡುವ ರಾಜಕಾರಣಿ ನಾನಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿ.

ಕ್ಷೇತ್ರದಲ್ಲಿ ಗೆಲುವಿನ ವಿಶ್ವಾಸ ಮೂಡಿಸುವ ಜನಬೆಂಬಲ ನಿಮಗೆ ಇದೆಯೆ?

ನಿರೀಕ್ಷೆಗೂ ಮೀರಿ ಜನ ಬೆಂಬಲ ನೀಡುತ್ತಿದ್ದಾರೆ. ಜನ ಬದಲಾವಣೆ ಬಯಸಿದ್ದಾರೆ. ಅಭಿವೃದ್ಧಿ ಕಾರ್ಯಸೂಚಿ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ.  * ಟಿಕೆಟ್‌ ನೀಡುವ ಗೊಂದಲ ಚುನಾವಣೆಯಲ್ಲಿ ಪರಿಣಾಮ ಬೀರಲಿದೆಯೇ? ನಮ್ಮಲ್ಲಿ ಯಾವುದೇ ಗೊಂದಲ ಭಿನ್ನಾಭಿಪ್ರಾಯಗಳು ಇಲ್ಲ. ಕ್ಷೇತ್ರದ ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶದಿಂದ ಎಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಈಗ ಎಲ್ಲ ಆಕಾಂಕ್ಷಿಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಬೆಂಬಲ ನೀಡಿದ್ದಾರೆ.

ನಿಮ್ಮ ಎದುರಾಳಿ?

ನಮಗೆ ಎದುರಾಳಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿ ಗೆಲ್ಲುವ ವಿಶ್ವಾಸ ಹೊಂದಿದೆ.

ಜನ ಬದಲಾವಣೆ ಬಯಸಿದ್ದಾರೆ: ಪಿ. ನಾಗರಾಜ (ಜೆಡಿಎಸ್‌)

ಪಿ. ನಾಗರಾಜ

ನೀವು ಏನು ಕೆಲಸ ಮಾಡುತ್ತೀರಿ ಎಂಬ ಕಾರಣಕ್ಕೆ ಜನರು ನಿಮಗೆ ಮತ ನೀಡಬೇಕು?

ಕ್ಷೇತ್ರದ ಅಭಿವೃದ್ಧಿಯಾಗಿಲ್ಲ. ಹಲವಾರು ಸಮಸ್ಯೆಗಳಿವೆ. ಮೂಲ ಸೌಕರ್ಯಗಳನ್ನೇ ಕಲ್ಪಿಸಿಲ್ಲ. ನೀರಿನ ಸಮಸ್ಯೆಯಿಂದ ಜನರು ಪರದಾಡುತ್ತಿದ್ದಾರೆ. ಸ್ವಚ್ಛತೆ ಇಲ್ಲ. ಉತ್ತಮ ರಸ್ತೆಗಳು ಇಲ್ಲ. ಕಳೆದ 20 ವರ್ಷಗಳಿಂದ ಬಡವರಿಗೆ ಹಕ್ಕುಪತ್ರಗಳನ್ನು ಕೊಟ್ಟಿಲ್ಲ. ಕಳೆದ 15 ವರ್ಷಗಳಿಂದಲೂ ಕಾಂಗ್ರೆಸ್‌ ಶಾಸಕರಿದ್ದರೂ ಅಭಿವೃದ್ಧಿಗೆ ಗಮನಹರಿಸಿಲ್ಲ.  ಹೀಗಾಗಿ ಜನ ಈ ಬಾರಿ ಬದಲಾವಣೆ ಬಯಸಿದ್ದು ಜೆಡಿಎಸ್‌ ಪರ ಬೆಂಬಲ ಸೂಚಿಸುತ್ತಿದ್ದಾರೆ. ಪಕ್ಷದ ವರಿಷ್ಠರಾದ ಎಚ್‌.ಡಿ. ದೇವೇಗೌಡರು ಎಚ್‌.ಡಿ. ಕುಮಾರಸ್ವಾಮಿ ಅವರ ನಾಯಕತ್ವ ಹಾಗೂ ಪಕ್ಷದ ಪಂಚರತ್ನ ಯೋಜನೆಗಳು ನಮಗೆ ಶ್ರೀರಕ್ಷೆಯಾಗಿವೆ. ಬಡವರ ಪರ ಯೋಜನೆಗಳನ್ನು ಪಕ್ಷವು ರೂಪಿಸಿದೆ. ಪಕ್ಷವನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ಅವರ ಕೈಬಲಪಡಿಸಲು ಬಯಸಿದ್ದಾರೆ.  ಪ್ರಾದೇಶಿಕ ಪಕ್ಷ ಬಂದರೆ ಜನರಿಗೆ ಒಳಿತಾಗುತ್ತದೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಜತೆಗೆ ಬಿಜೆಪಿಯ ಭ್ರಷ್ಟ ಆಡಳಿತಕ್ಕೆ ಜನ ಬೇಸತ್ತಿದ್ದಾರೆ.

ಕ್ಷೇತ್ರದಲ್ಲಿ ಗೆಲುವಿನ ವಿಶ್ವಾಸ ಮೂಡಿಸುವ ಜನಬೆಂಬಲ ನಿಮಗೆ ಇದೆಯೆ?

ಜನ ಬೆಂಬಲ ಇದೆ. ಸಾವಿರಾರು ಜನ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷದ ನಾಯಕತ್ವದ ಮೇಲೆ ಜನ ಭರವಸೆ ಹೊಂದಿದ್ದಾರೆ.

ಪ್ರಮುಖ ಎದುರಾಳಿ?

ಕಾಂಗ್ರೆಸ್‌ ನಮಗೆ ಎದುರಾಳಿ. ಬಿಜೆಪಿ ನಮಗೆ ಎದುರಾಳಿಯೇ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.