ಬೆಂಗಳೂರು: ‘ಭಾರತದ ಪ್ರಾಚೀನ ಸಂಸ್ಕೃತಿ, ಯೋಗ ಮತ್ತು ಭಾರತೀಯ ಸಾಂಪ್ರದಾಯಿಕ ಕಲೆಗಳ ಬಗ್ಗೆ ಅರಿವು ಮೂಡಿಸಲು ಸ್ಪಿಕ್ ಮೆಕೆಯ ಸ್ಥಾಪಕ, 73 ವರ್ಷದ ಪ್ರೊ. ಕಿರಣ್ ಸೇಥ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೈಸಿಕಲ್ ಯಾತ್ರೆ ಹಮ್ಮಿಕೊಂಡಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೈಸಿಕಲ್ ತುಳಿಯುವುದು ಮನುಷ್ಯನ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯಕ್ಕೆ ಒಳ್ಳೆಯದು. ಮಹಾತ್ಮ ಗಾಂಧೀಜಿ ಅವರ ಸರಳ ಜೀವನ ಮತ್ತು ಅವರ ಚಿಂತನೆಗಳನ್ನು ಯುವಜನತೆಯಲ್ಲಿ ಹರಡಲು ಈ ಬೈಸಿಕಲ್ ಯಾತ್ರೆ ಮಾಡುತ್ತಿದ್ದೇನೆ’ ಎಂದು ಮಾಹಿತಿ ನೀಡಿದರು.
‘ಸ್ಪಿಕ್‌ಮೆಕೆ ಸಂಸ್ಥೆಯಿಂದ ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ, ಜಾನಪದ ಸಂಗೀತ ಮತ್ತು ನೃತ್ಯ, ಧ್ಯಾನ, ಯೋಗ, ಚಲನಚಿತ್ರಗಳ ಪ್ರದರ್ಶನ, ಶ್ರೇಷ್ಠ ವ್ಯಕ್ತಿಗಳ ಭಾಷಣ, ಪರಂಪರೆಯ ನಡಿಗೆಯ ಜೊತೆಗೆ ಭಾರತೀಯ ಪರಂಪರೆಯ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಆಸಕ್ತಿಯನ್ನು ಉತ್ತೇಜಿಸಲು ಶಾಲಾ–ಕಾಲೇಜುಗಳಲ್ಲಿ ಕರಕುಶಲ ಶಿಬಿರಗಳನ್ನು ಆಯೋಜಿಸಲಾಗುತ್ತದೆ’ ಎಂದರು.
ಪ್ರೊ. ಕಿರಣ್ ಸೇಥ್ ಅವರು 2022ರ ಆಗಸ್ಟ್ 15ರಿಂದ ಕಾಶ್ಮೀರದ ಶ್ರೀನಗರದಿಂದ ಬೈಸಿಕಲ್ ಯಾತ್ರೆ ಪ್ರಾರಂಭಿಸಿದ್ದರು. ದೇಶದ ವಿವಿಧ ರಾಜ್ಯಗಳ ಸಣ್ಣ ಪುಟ್ಟ ಹಳ್ಳಿಗಳ ಜನರಲ್ಲಿ ಭಾರತೀಯ ಸಾಂಪ್ರದಾಯಿಕ ಕಲೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.