ADVERTISEMENT

ಬೆಂಗಳೂರು: ಕಾಲೇಜಿಗೆ ಸಿ.ಎ ನಿವೇಶನ ಹಂಚಿಕೆ ಪತ್ರ

ಬಿಡಿಎ: ಕೆಂಗೇರಿ ಪ್ರಥಮದರ್ಜೆ ಕಾಲೇಜಿಗೆ ಪತ್ರ; ಮಾರುಕಟ್ಟೆ ದರದಲ್ಲಿ ₹ 21 ಕೋಟಿಗೆ ಗುತ್ತಿಗೆ!

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 19:03 IST
Last Updated 14 ಅಕ್ಟೋಬರ್ 2024, 19:03 IST
ಕೆಂಗೇರಿ ಪ್ರಥಮ ದರ್ಜೆ ಕಾಲೇಜಿಗೆ ಬಿಡಿಎ ನೀಡಿರುವ ಹಂಚಿಕೆ ಪತ್ರ
ಕೆಂಗೇರಿ ಪ್ರಥಮ ದರ್ಜೆ ಕಾಲೇಜಿಗೆ ಬಿಡಿಎ ನೀಡಿರುವ ಹಂಚಿಕೆ ಪತ್ರ   

ಬೆಂಗಳೂರು: ಎರಡು ದಶಕದ ಹಿಂದೆ ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೀಸಲಿಟ್ಟಿದ್ದ ನಾಗರಿಕ ಸೌಲಭ್ಯ (ಸಿಎ) ನಿವೇಶನದ ಹಂಚಿಕೆ ಪತ್ರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅ.14ರಂದು ನೀಡಿದೆ.

ಸರ್‌ ಎಂ. ವಿಶ್ವೇಶ್ವರಯ್ಯ (ಎಸ್‌ಎಂವಿ) ಬಡಾವಣೆಯ ಒಂದನೇ ಬ್ಲಾಕ್‌ನಲ್ಲಿ ಸಂಖ್ಯೆ 3ರ ನಾಗರಿಕ ಸೌಲಭ್ಯ (ಸಿಎ) ನಿವೇಶನವನ್ನು ಸರ್ಕಾರಿ ಕಾಲೇಜಿಗಾಗಿ ಮೀಸಲಿಡಲಾಗಿತ್ತು.

ಆದರೂ, ಶಿಕ್ಷಣ ಇಲಾಖೆಗೆ ಬಿಡಿಎ ಈ ನಿವೇಶನವನ್ನು ಹಂಚಿಕೆ ಮಾಡಿಲ್ಲ ಎಂದು ‘ಪ್ರಜಾವಾಣಿ’ಯ ಅಕ್ಟೋಬರ್‌ 3ರ ಸಂಚಿಕೆಯಲ್ಲಿ ‘ಕಾಲೇಜಿಗೆ ನಿವೇಶನ ನೀಡಲು ನಿರ್ಲಕ್ಷ್ಯ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು.

ADVERTISEMENT

‘ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್‌ ಸಹಿ ಬಾಕಿ ಇದ್ದು, ಶೀಘ್ರ ಅವರು ಸಹಿ ಹಾಕಲಿದ್ದಾರೆ’ ಎಂದು ಬಿಡಿಎ ಆಯುಕ್ತ ಎನ್‌. ಜಯರಾಂ ತಿಳಿಸಿದ್ದರು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ, ಅಕ್ಟೋಬರ್‌ 8ರಂದು ಸಿದ್ದವಾಗಿರುವ ಹಂಚಿಕೆ ಪತ್ರವನ್ನು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೋಮವಾರ ಹಸ್ತಾಂತರಿಸಲಾಗಿದೆ.

ಮಾರುಕಟ್ಟೆ ದರ: 19,109.91 ಚದರ ಮೀಟರ್‌ ವಿಸ್ತೀರ್ಣದ ಸಿಎ ನಿವೇಶನಕ್ಕೆ ಪ್ರತಿ ಚದರ ಮೀಟರ್‌ಗೆ ₹9,750 ದರ ವಿಧಿಸಲಾಗಿದೆ. ₹3.35 ಕೋಟಿ ಜಿಎಸ್‌ಟಿ ಸೇರಿದಂತೆ ಒಂದೇ ಕಂತಿನಲ್ಲಿ ₹21.98 ಕೋಟಿ ಪಾವತಿಸಲು ಹಂಚಿಕೆ ಪತ್ರದಲ್ಲಿ ಸೂಚಿಸಲಾಗಿದೆ.

30 ವರ್ಷಕ್ಕೆ ಗುತ್ತಿಗೆ ನೀಡಲಾಗುತ್ತಿದ್ದು, ₹60.80 ಲಕ್ಷ ಜಿಎಸ್‌ಟಿ ಸೇರಿದಂತೆ ಪ್ರತಿ ವರ್ಷ ₹3.98 ಕೋಟಿ ಗುತ್ತಿಗೆ ಹಣ ಪಾವತಿಸಬೇಕಿದೆ. ಇದಲ್ಲದೆ, ಪ್ರತಿ ವರ್ಷ ಹೆಚ್ಚುವರಿಯಾಗಿ ₹57 ಸಾವಿರ ಪಾವತಿಸಲು ಹೇಳಲಾಗಿದೆ.

‘ಬಿಡಿಎ ಬಡಾವಣೆಗಳಲ್ಲಿ ಹಂಚಿಕೆಯಾಗಿರುವ ನಿವೇಶನಗಳ ದರದ ಶೇ 20ರಷ್ಟಕ್ಕೆ ಆಸ್ಪತ್ರೆ, ಶಿಕ್ಷಣ, ಬೆಸ್ಕಾಂ ಸೇರಿದಂತೆ ಸರ್ಕಾರದ ಇಲಾಖೆಗಳಿಗೆ ಸಿಎ ನಿವೇಶನ ನೀಡಬೇಕು. ಸರ್‌ ಎಂ.ವಿಶ್ವೇಶ್ವರಯ್ಯ (ಎಸ್‌ಎಂವಿ) ಬಡಾವಣೆಯ ಒಂದನೇ ಬ್ಲಾಕ್‌ನಲ್ಲಿ ಸರ್ಕಾರಿ ಕಾಲೇಜಿಗಾಗಿ ಎರಡು ದಶಕಗಳ ಹಿಂದೆ ಮೀಸಲಿಟ್ಟಿರುವ ಈ ಸಿಎ ನಿವೇಶನಕ್ಕೆ ಈಗಿನ ಮಾರುಕಟ್ಟೆ ದರದಲ್ಲಿ ಶಿಕ್ಷಣ ಇಲಾಕೆಗೆ ಹಂಚಿಕೆ ಪತ್ರ ನೀಡಿರುವುದು ಸರಿಯಲ್ಲ’ ಎಂದು ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆಯ ಅಧ್ಯಕ್ಷ ಶಿವಕುಮಾರ್‌ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.