ADVERTISEMENT

ಶಿವಾಜಿನಗರ ಮಾರುಕಟ್ಟೆ ಬಂದ್: ವ್ಯಾಪಾರ ವಹಿವಾಟು ಸ್ಥಗಿತ

ಪೌರತ್ವ (ತಿದ್ದುಪಡಿ) ಕಾಯ್ದೆ, ಎನ್‌ಆರ್‌ಸಿ ವಿರುದ್ಧ ಹೋರಾಟ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 22:20 IST
Last Updated 21 ಜನವರಿ 2020, 22:20 IST
ಬಂದ್‌ ಆಗಿದ್ದ ಅಂಗಡಿಗಳ ಎದುರು ರಾಷ್ಟ್ರಧ್ವಜ ಹಿಡಿದು ಸಾಗಿದ ಯುವಕರು
ಬಂದ್‌ ಆಗಿದ್ದ ಅಂಗಡಿಗಳ ಎದುರು ರಾಷ್ಟ್ರಧ್ವಜ ಹಿಡಿದು ಸಾಗಿದ ಯುವಕರು   

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಶಿವಾಜಿನಗರದ ಬಹುಪಾಲು ವ್ಯಾಪಾರಿಗಳು ಅಂಗಡಿ– ಮುಂಗಟ್ಟುಗಳನ್ನು ಬಂದ್ ಮಾಡಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

‘ಜಂಟಿ ಕ್ರಿಯಾ ಸಮಿತಿ ಕರ್ನಾಟಕ’ ಸಂಘಟನೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ‘ಸಿಎಎ, ಎನ್‌ಆರ್‌ಸಿ ಬೇಡ’, ‘ದೇಶದ ನಾಗರಿಕರನ್ನು ಒಡೆಯಬೇಡಿ’, ‘ಬಿಜೆಪಿ ಹಠಾವೋ ದೇಶ ಬಚಾವೋ’ ಹಾಗೂ ‘ಹಿಂದೂಸ್ತಾನ್ ಹಾಗೂ ಸಂವಿಧಾನ ಉಳಿಸಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಪ್ರತಿಭಟನೆಯುದ್ದಕ್ಕೂ ರಾಷ್ಟ್ರಧ್ವಜಗಳು ಹಾರಾಡಿದವು.

ಗಾಂಧಿ ಚೌಕ್‌ನಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿತ್ತು. ಬೆಳಿಗ್ಗೆ 6 ಗಂಟೆಯಿಂದಲೇ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನಾ ಸ್ಥಳಕ್ಕೆ ಬಂದರು. ರಸೆಲ್ ಮಾರುಕಟ್ಟೆ, ಕಂಟೋನ್ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಬಹುಪಾಲು ಅಂಗಡಿಗಳು ಬಂದ್ ಆಗಿದ್ದವು. ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.

ADVERTISEMENT

ಬಹಿರಂಗ ಸಭೆಯಲ್ಲಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಪಾಷಾ, ‘ನಾವು ಕಾನೂನು ವಿರೋಧಿಗಳಲ್ಲ. ಕೇಂದ್ರ ಸರ್ಕಾರವೇ ಕಾನೂನು ಹಾಗೂ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ. ಹೀಗಾಗಿ, ನಾವು ಬೀದಿಗೆ ಬಂದು ಹೋರಾಟ ಮಾಡುತ್ತಿದ್ದೇವೆ’ ಎಂದರು.

‘ಕೇಂದ್ರ ಸರ್ಕಾರ ಪ್ರತಿಷ್ಠೆಗಾಗಿ ಪೌರತ್ವ (ತಿದ್ದುಪಡಿ) ಕಾಯ್ದೆ ತಂದು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮಾಡುತ್ತಿದೆ. ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸುತ್ತಿದೆ. ಕಾನೂನು ವಾಪಸು ಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

‘ದೇಶದಲ್ಲಿ 3 ಕೋಟಿ ಅಕ್ರಮ ವಾಸಿಗಳು ನೆಲೆಸಿರಬಹುದು. ಅವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ. ಆದರೆ, ಅವರಿಗಾಗಿ ದೇಶದ 130 ಕೋಟಿ ಜನರಿಗೆ ತೊಂದರೆ ನೀಡುವುದು ಸರಿಯೇ’ ಎಂದು ಪ್ರಶ್ನಿಸಿದರು.

ಎನ್‌ಆರ್‌ಸಿಗೆ ದಾಖಲೆ ತೋರಿಸಬೇಡಿ: ‘ಜನಗಣತಿ ಮಾಡಲು ಬಂದರೆ ಮಾತ್ರ ದಾಖಲೆ ತೋರಿಸಿ. ಎನ್‌ಆರ್‌ಸಿಗಾಗಿ ಯಾರಾದರೂ ಮನೆಗೆ ಬಂದು ದಾಖಲೆ ಕೇಳಿದರೆ ತೋರಿಸಬೇಡಿ’ ಎಂದು ಜಮೀರ್ ಪಾಷಾ ಕರೆ ನೀಡಿದರು.

ಗಣರಾಜ್ಯೋತ್ಸವದಂದು ಪ್ರತಿಭಟನೆ
‘ಸಿಎಎ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಇದೇ 26ರ ಗಣರಾಜ್ಯೋತ್ಸವದಂದು ಪ್ರತಿಭಟನೆ ನಡೆಯಲಿದೆ’ ಎಂದು ‘ಜಂಟಿ ಕ್ರಿಯಾ ಸಮಿತಿ ಕರ್ನಾಟಕ’ ಸಂಘಟನೆ ಪದಾಧಿಕಾರಿಗಳು ತಿಳಿಸಿದರು.

‘ದೇಶ, ಸಂವಿಧಾನದ ಪಂಕ್ಚರ್‌ ತಿದ್ದಬೇಕು’
‘ನಾವೆಲ್ಲ ಪಂಕ್ಚರ್ ತಿದ್ದುವವರೆಂದು ಹೇಳುತ್ತಿದ್ದಾರೆ. ಅದು ನಿಜವೇ. ನೀವೆಲ್ಲ ಸಂವಿಧಾನ, ದೇಶ ಹಾಗೂ ನಾಗರಿಕರನ್ನು ಪಂಕ್ಚರ್ ಮಾಡಲು ಹೊರಟಿದ್ದಿರಾ. ಆ ಪಂಕ್ಚರ್ ತಿದ್ದಲು ನಾವೆಲ್ಲ ಹೋರಾಟ ಮಾಡುತ್ತಿದ್ದೇವೆ’ ಎಂದು ಚಾರ್‌ಮೀನರ್ ಮಸೀದಿಯ ಖತೀಬ್ ಮೌಲಾನಾ ಸೈಯದ್ ಎಜಾಸ್ ಅಹ್ಮದ್ ನದ್ವಿ ಹೇಳಿದರು.

‘ದೇಶದಲ್ಲಿ ಶೇ 3ರಷ್ಟು ಇರುವ ಜನರು ನಮ್ಮನ್ನೆಲ್ಲ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಸಿಎಎ ವಿರುದ್ಧ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಇದಕ್ಕೆ ಮಣಿದು ಕಾನೂನು ವಾಪಸು ಪಡೆಯಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಜೀವಂತವಾಗಿರಲಿದೆ’ ಎಂದು ತಿಳಿಸಿದರು.

‘ಸರ್ಕಾರವೇ ಆಧಾರ್ ಕೊಟ್ಟಿದೆ. ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್, ಪಾಸ್‌ಪೋರ್ಟ್‌ ಸಹ ನೀಡಿದೆ. ಅವೆಲ್ಲವೂ ಅನಧಿಕೃತವೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈ ಹಿಂದೆ ಚುನಾವಣೆ ಬಂದಾಗ ಆಯೋಗದ ಗುರುತಿನ ಚೀಟಿ ತೋರಿಸಿ ಮತ ಹಾಕಿದ್ದೆವು. ಮುಂಬರುವ ಚುನಾವಣೆ ವೇಳೆ ಆ ಚೀಟಿಗೂ ಬೆಲೆ ಇರುವುದಿಲ್ಲ. ಇಂದಿನ ಕೇಂದ್ರ ಸರ್ಕಾರಕ್ಕೆ ಅದೇ ಬೇಕಿರುವುದು’ ಎಂದು ಮಾರ್ಮಿಕವಾಗಿ ಹೇಳಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಅಜ್ಜಂದಿರು ಹೋರಾಡಿದ್ದಾರೆ. ಪ್ರಾಣವನ್ನೂ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಹಾಗೂ ಸಂವಿಧಾನ ಉಳಿಸಲು ನಾವೆಲ್ಲರೂ ಹೋರಾಡಬೇಕಿದೆ. ಮುಂದೆಯೂ ಹೋರಾಡುತ್ತಲೇ ಇರಬೇಕಿದೆ’ ಎಂದು ಕರೆ ನೀಡಿದರು.

‘ಆರ್‌ಎಸ್‌ಎಸ್‌, ಬಜರಂಗ ದಳ ನಿಷೇಧಿಸಿ’
‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ನಿಷೇಧಿಸುವ ಮುನ್ನ ಆರ್‌ಎಸ್ಎಸ್ ಮತ್ತು ಬಜರಂಗ ದಳ ನಿಷೇಧಿಸಿ’ ಎಂದು ಶಾಸಕ ಬಿ.ಜಡ್‌. ಜಮೀರ್ ಅಹ್ಮದ್ ಖಾನ್‌ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು, ‘ಆರ್‌ಎಸ್ಎಸ್ ಮತ್ತು ಬಜರಂಗ ದಳದವರು ಬಹಿರಂಗವಾಗಿಯೇ ಕೋಮುದ್ವೇಷ ಬಿತ್ತುವ ಹೇಳಿಕೆ ನೀಡುತ್ತಾರೆ. ಎಸ್‌ಡಿಪಿಐ ಮಾತ್ರ ಇದುವರೆಗೂ ಅಂಥ ಹೇಳಿಕೆ ನೀಡಿಲ್ಲ. ನೀಡಿದರೆ ಬಿಜೆಪಿಯವರು ತೋರಿಸಲಿ’ ಎಂದು ಸವಾಲು ಹಾಕಿದರು.

‘₹1 ಕೋಟಿ ನಷ್ಟ’
‘ಶಿವಾಜಿನಗರದ ಮಾರುಕಟ್ಟೆ ಬಂದ್ ಮಾಡಿದ್ದರಿಂದಾಗಿ ಸುಮಾರು ₹ 1.10 ಕೋಟಿ ನಷ್ಟವಾಗಿದೆ’ ಎಂದು ಇಬ್ರಾಹಿಂ ಸಾಹೇಬ್ ರಸ್ತೆ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್‌.ಎ. ಇಮ್ತಿಯಾಜ್ ಪಾಷಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.