ADVERTISEMENT

ಸಾರಿಗೆ ಇಲಾಖೆಯಿಂದಲೇ ‘ಕ್ಯಾಬ್ ಸೇವಾ ಆ್ಯಪ್’ ?

ಓಲಾ, ಉಬರ್‌: ಪರ್ಯಾಯ ವ್ಯವಸ್ಥೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 19:30 IST
Last Updated 8 ಜುಲೈ 2018, 19:30 IST

ಬೆಂಗಳೂರು: ಮೊಬೈಲ್ ಆ್ಯಪ್‌ ಆಧರಿತ ಕ್ಯಾಬ್‌ ಸೇವೆ ಒದಗಿಸುತ್ತಿರುವ ಓಲಾ ಹಾಗೂ ಉಬರ್‌ ಕಂಪನಿಗಳಿಗೆ ಪರ್ಯಾಯವಾಗಿ ತನ್ನದೇ ‘ಕ್ಯಾಬ್ ಸೇವಾ ಆ್ಯಪ್‌’ ರೂಪಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ದೇಶದಲ್ಲೇ ಅತ್ಯಧಿಕ ಕ್ಯಾಬ್‌ಗಳು ಹಾಗೂ ಪ್ರಯಾಣಿಕರನ್ನು ಹೊಂದಿರುವ ನಗರ ಬೆಂಗಳೂರು. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಓಲಾ ಹಾಗೂ ಉಬರ್‌ ಕಂಪನಿಗಳು, ಸ್ಥಳೀಯ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ ಎಂಬ ಆರೋಪವಿದೆ. ಈ ಬಗ್ಗೆ ಕೆಲವು ಚಾಲಕರು, ಸಾರಿಗೆ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಅದಕ್ಕೆ ಸ್ಪಂದಿಸಿರುವ ಸಚಿವ ಡಿ.ಸಿ.ತಮ್ಮಣ್ಣ, ಇಲಾಖೆಯಿಂದಲೇ ಆ್ಯಪ್‌ ರೂಪಿಸುವ ಚಿಂತನೆ ಹೊಂದಿದ್ದಾರೆ.

‘ಚಾಲಕರು ಕಷ್ಟಪಟ್ಟು ದುಡಿಯುತ್ತಿದ್ದಾರೆ. ಅವರ ದುಡಿಮೆಯಲ್ಲಿ ಕಂಪನಿಗಳು ಹೆಚ್ಚಿನ ಕಮಿಷನ್ ಪಡೆಯುತ್ತಿವೆ. ಚಾಲಕರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಕೆಎಸ್‌ಆರ್‌ಟಿಸಿ ವತಿಯಿಂದಲೇ ಆ್ಯಪ್‌ ರೂಪಿಸಿ ಕ್ಯಾಬ್‌ ಸೇವೆ ಒದಗಿಸುವ ಬಗ್ಗೆ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದೇನೆ’ ಎಂದು ತಮ್ಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹಲವು ಕಂಪನಿಗಳು ಹೊರ ರಾಜ್ಯಗಳ ಚಾಲಕರನ್ನು ಕರೆಸಿ ಕ್ಯಾಬ್‌ ಓಡಿಸುತ್ತಿವೆ. ಅಂಥ ಚಾಲಕರು, ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಅದರಿಂದ ಕನ್ನಡಿಗ ಚಾಲಕರಿಗೂ ಕೆಟ್ಟ ಹೆಸರು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾಬ್‌ಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಜೀವನ್‌ಬಿಮಾ ನಗರ ಹಾಗೂ ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಪ್ರಕರಣಗಳೇ ಅದಕ್ಕೆ ಸಾಕ್ಷಿ’ ಎಂದರು.

ಇನ್ಫೊಸಿಸ್‌ ಜತೆ ಮಾತುಕತೆ

‘ನಮ್ಮದೇ ಆ್ಯಪ್‌ನಿಂದ ಸಮಸ್ಯೆಗಳು ಪರಿಹಾರವಾಗುವ ಭರವಸೆ ಇದೆ. ಈ ಬಗ್ಗೆ ಇನ್ಫೊಸಿಸ್ ಮುಖ್ಯಸ್ಥರ ಜತೆ ಮಾತುಕತೆ ನಡೆಸಲಿದ್ದೇವೆ. ಅದಕ್ಕೂ ಮುನ್ನ, ಹೊಸ ಆ್ಯಪ್‌ ಬಗ್ಗೆ ಚಾಲಕರು ಹಾಗೂ ಪ್ರಯಾಣಿಕರಿಂದ ಸಲಹೆಗಳನ್ನು ಪಡೆಯಲಿದ್ದೇವೆ’ ಎಂದು ತಮ್ಮಣ್ಣ ಹೇಳಿದರು.

ಕುಮಾರಸ್ವಾಮಿ ನೇತೃತ್ವದಲ್ಲಿ ‘ನಮ್ಮ ಟೈಗರ್’ ಆ್ಯಪ್‌

ವಿಧಾನಸಭಾ ಚುನಾವಣೆಗೂ ಮುನ್ನ ಓಲಾ ಹಾಗೂ ಉಬರ್‌ ಕಂಪನಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ಚಾಲಕರ ಬೆಂಬಲಕ್ಕೆ ನಿಂತಿದ್ದಎಚ್‌.ಡಿ.ಕುಮಾರಸ್ವಾಮಿ, ‘ನಮ್ ಟೈಗರ್’ ಆ್ಯಪ್ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಆ ಕಂಪನಿಗೆ ಸಾರಿಗೆ ಇಲಾಖೆಯಿಂದ ಇದುವರೆಗೂ ಪರವಾನಗಿ ಸಿಕ್ಕಿಲ್ಲ.

ಈಗ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದು, ಸಾರಿಗೆ ಇಲಾಖೆಯಿಂದಲೇ ಚಾಲಕರಿಗಾಗಿ ಆ್ಯಪ್‌ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ ತಮ್ಮಣ್ಣ, ‘ಚುನಾವಣೆ ಹಾಗೂ ಸರ್ಕಾರದ ರಚನೆ ಒತ್ತಡದಿಂದಾಗಿ ಕಂಪನಿ ಬೆಳವಣಿಗೆ ಬಗ್ಗೆ ಗಮನಹರಿಸಲು ಕುಮಾರಸ್ವಾಮಿಯವರಿಗೆ ಸಾಧ್ಯವಾಗಿಲ್ಲ. ಆದರೆ, ಚಾಲಕರ ಬಗ್ಗೆ ಅವರಿಗೆ ಕಾಳಜಿ ಇದೆ. ಅವರ ಕಷ್ಟಗಳಿಗೆ ಸದ್ಯದಲ್ಲೇ ಪರಿಹಾರ ಸಿಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.