ADVERTISEMENT

ಸಂಪುಟದ ನಿರ್ಣಯ ವಿಶ್ವಾಸಾರ್ಹವಾಗಿಲ್ಲ: ರಾಜ್ಯಪಾಲ ಥಾವರಚಂದ್ ಗೆಹಲೋತ್‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 16:29 IST
Last Updated 17 ಆಗಸ್ಟ್ 2024, 16:29 IST
<div class="paragraphs"><p>ರಾಜ್ಯಪಾಲ ಥಾವರ ಚಂದ್ ಗೆಹಲೋತ್‌</p></div>

ರಾಜ್ಯಪಾಲ ಥಾವರ ಚಂದ್ ಗೆಹಲೋತ್‌

   

ಬೆಂಗಳೂರು: ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ಕೋರಿರುವ ಅರ್ಜಿ ತಿರಸ್ಕರಿಸುವಂತೆ ಸಲಹೆ ನೀಡಲು ಆಗಸ್ಟ್‌ 1ರಂದು ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವು ವಿಶ್ವಾಸ ಮೂಡಿಸುವಂತಿಲ್ಲ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಹೇಳಿದ್ದಾರೆ.

ಪ್ರದೀಪ್‌ ಕುಮಾರ್‌ ಎಸ್‌.ಪಿ., ಟಿ.ಜೆ. ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಗಳನ್ನು ಆಧರಿಸಿ ಮುಖ್ಯಮಂತ್ರಿಯವರ ವಿರುದ್ಧ ತನಿಖೆಗೆ ಅನುಮತಿ ನೀಡಿ ಶುಕ್ರವಾರ ಹೊರಡಿಸಿರುವ ಆರು ಪುಟಗಳ ಆದೇಶದಲ್ಲಿ ಅವರು ಈ ಅಭಿಪ್ರಾಯ ಉಲ್ಲೇಖಿಸಿದ್ದಾರೆ. ದೂರುಗಳು ಮತ್ತು ದಾಖಲೆಗಳನ್ನು ತಾವು ಸ್ವತಂತ್ರವಾಗಿ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ADVERTISEMENT

‘ತನಿಖೆಗೆ ಏಕೆ ಅನುಮತಿ ನೀಡಬಾರದು ಎಂದು ಜುಲೈ 26ರಂದು ಸಿದ್ದರಾಮಯ್ಯ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದೆ. ಆಗಸ್ಟ್‌ 3ರಂದು ಉತ್ತರ ನೀಡಿದ್ದ ಸಿದ್ದರಾಮಯ್ಯ, ಆರೋಪಗಳನ್ನು ಅಲ್ಲಗಳೆದಿದ್ದರು. ಆಗಸ್ಟ್‌ 1ರಂದು ಸಂಪುಟ ಸಭೆಯ ನಿರ್ಣಯವು ನನ್ನ ಕಚೇರಿಗೆ ತಲುಪಿತು. ಆಗಸ್ಟ್‌ 4ರಂದು ಆರೋಪಗಳನ್ನು ನಿರಾಕರಿಸಿ ಮತ್ತಷ್ಟು ದಾಖಲೆಗಳನ್ನು ಸಲ್ಲಿಸಿದ್ದರು’ ಎಂದು ರಾಜ್ಯಪಾಲರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಮುಖ್ಯ ಕಾರ್ಯದರ್ಶಿಯವರು ಆಗಸ್ಟ್‌ 1ರಂದು ಸಂಪುಟ ಸಭೆ ಕರೆದಿರುವುದು ಕಡತಗಳಲ್ಲಿ ಉಲ್ಲೇಖವಾಗಿದೆ. ತಾವು ಜುಲೈ 26ರಂದು ನೀಡಿದ್ದ ಶೋಕಾಸ್‌ ನೋಟಿಸ್‌ ಅನ್ನು ಆ.1ರ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚಿಸಲಾಗಿದೆ. ಸಿದ್ದರಾಮಯ್ಯ ಅವರು ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿರಲಿಲ್ಲ ಎಂಬುದನ್ನೂ ಗಮನಿಸಲಾಗಿದೆ ಎಂದು ರಾಜ್ಯಪಾಲರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ಕೋರಿರುವ ಅರ್ಜಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮುಖ್ಯಮಂತ್ರಿಯವರ ಸಲಹೆಯಂತೆ ನೇಮಕಗೊಂಡ ಸಂಪುಟ ಸದಸ್ಯರು, ನೋಟಿಸ್‌ ಹಿಂಪಡೆಯುವಂತೆ ಮತ್ತು ಅರ್ಜಿಯನ್ನು ತಿರಸ್ಕರಿಸುವಂತೆ ಸಲಹೆ ನೀಡಿದ್ದಾರೆ. ಇದು ವಿಶ್ವಾಸ ಮೂಡಿಸುವ ನಿರ್ಣಯವಲ್ಲ’ ಎಂದಿದ್ದಾರೆ.

ಮಧ್ಯಪ್ರದೇಶ ವಿಶೇಷ ಪೊಲೀಸ್‌ ಘಟಕ ಮತ್ತು ಮಧ್ಯಪ್ರದೇಶ ಸರ್ಕಾರದ ಮಧ್ಯದ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್‌ 2004ರಲ್ಲಿ ನೀಡಿದ್ದ ತೀರ್ಪನ್ನು ತಮ್ಮ ಆದೇಶದಲ್ಲಿ ಉಲ್ಲೇಖಿಸಿರುವ ರಾಜ್ಯಪಾಲರು, ಸಂಪುಟದ ಸಲಹೆಯನ್ನು ರಾಜ್ಯಪಾಲರು ಪಾಲಿಸಬೇಕಾದುದು ಮತ್ತು ವಿಶೇಷ ಸಂದರ್ಭಗಳಲ್ಲಿ ವಿವೇವಚನಾ ಅಧಿಕಾರವನ್ನು ಬಳಸಲು ಇರುವ ಅವಕಾಶಗಳ ಕುರಿತು ಈ ಪ್ರಕರಣವು ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ.

‘ಇಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ಮೇಲ್ನೋಟಕ್ಕೆ ದೃಢಪಡಿಸುವಂತಹ ಪ್ರಬಲ ದಾಖಲೆಗಳು ಲಭ್ಯವಿದ್ದಾಗಲೂ ರಾಜ್ಯಪಾಲರು ವಿವೇಚನಾ ಅಧಿಕಾರ ಬಳಸಲು ಅವಕಾಶ ನೀಡದೆ ಸರ್ಕಾರಕ್ಕೆ ಅನುಮತಿ ನಿರಾಕರಿಸುವ ಅಧಿಕಾರ ನೀಡಿದಲ್ಲಿ ಕಾನೂನಿನ ಆಡಳಿತವು ಕುಸಿದುಬೀಳುತ್ತದೆ. ಅಧಿಕಾರದಲ್ಲಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯಗಳು ಲಭ್ಯವಿದ್ದಾಗಲೂ ತನಿಖೆಗೆ ಅನುಮತಿ ನಿರಾಕರಿಸಿದರೆ ಅಥವಾ ನಿರ್ಣಯವನ್ನು ತಡೆ ಹಿಡಿದರೆ ಅದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ತಮ್ಮ ವಿರುದ್ಧ ವಿಚಾರಣೆಗೆ ಅನುಮತಿ ನೀಡವುದಿಲ್ಲ ಎಂಬ ಭಾವನೆಯಿಂಧ ಅಧಿಕಾರದಲ್ಲಿರುವ ವ್ಯಕ್ತಿಗಳು ಕಾನೂನು ಉಲ್ಲಂಘಿಸಲು ಪ್ರೇರಣೆ ದೊರೆಯುತ್ತದೆʼ ಎಂದು ಸುಪ್ರೀಂ ಕೋರ್ಟ್‌ 2004ರ ತೀರ್ಪಿನಲ್ಲಿ ಹೇಳಿದ್ದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.