ADVERTISEMENT

ಕೆಫೆ ಕಾಫಿ ಡೇ ಮಳಿಗೆಗೆ ಬೀಗ

ಧೂಮಪಾನಕ್ಕೆ ಅವಕಾಶ, ನಿಷೇಧಿತ ಪ್ಲಾಸ್ಟಿಕ್‌ ಬಳಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 19:54 IST
Last Updated 8 ಏಪ್ರಿಲ್ 2019, 19:54 IST

ಬೆಂಗಳೂರು: ಮಳಿಗೆಯಲ್ಲಿ ಧೂಮಪಾನಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ಹಾಗೂ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡಿದ್ದಕ್ಕೆ ಎಂ.ಎಸ್‌.ರಾಮಯ್ಯ ಆಸ್ಪತ್ರೆ ಸಮೀಪದ ‘ಕೆಫೆ ಕಾಫಿ ಡೇ’ ಮಳಿಗೆಯನ್ನು ಪಾಲಿಕೆ ಆರೋಗ್ಯ ಅಧಿಕಾರಿಗಳು ಸೋಮವಾರ ಮುಚ್ಚಿಸಿದ್ದಾರೆ. ಅಂಗಡಿ ಮಾಲೀಕರಿಗೆ ₹ 12,800 ದಂಡ ವಿಧಿಸಿದ್ದಾರೆ.

‘ನಾವು ದಿಢೀರ್‌ ತಪಾಸಣೆ ಕೈಗೊಂಡಾಗ, ಕೆಫೆ ಕಾಫಿ ಡೇ ಮಳಿಗೆಯಲ್ಲಿ ಧೂಮಪಾನಕ್ಕೆ ಅವಕಾಶ ಕಲ್ಪಿಸಿರುವುದು ಕಂಡುಬಂತು. ಹಸಿ ಕಸ ಮತ್ತು ಒಣ ಕಸವನ್ನು ಸರಿಯಾಗಿ ವಿಂಗಡಿಸಿರಲಿಲ್ಲ. ನಿಷೇಧಿತ ಪ್ಲಾಸ್ಟಿಕ್‌ ಕೂಡಾ ಬಳಸುತ್ತಿದ್ದರು. ಹಾಗಾಗಿ ಮಳಿಗೆಯನ್ನು ಮುಚ್ಚಿಸಿದ್ದೇವೆ. ಈ ಬಗ್ಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡುವುದರ ಜೊತೆಗೆ ದಂಡವನ್ನೂ ವಿಧಿಸಿದ್ದೇವೆ’ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಬಾಲಸುಂದರ್‌ ತಿಳಿಸಿದರು.

‘ಬೆಂಗಳೂರಿನಲ್ಲಿ ಹೊಂದಿರುವ ಇತರ ಮಳಿಗೆಗಳಲ್ಲೂ ಧೂಮಪಾನವನ್ನು ಸಂಪೂರ್ಣ ನಿಷೇಧಿಬೇಕು. ಸಿಗರೇಟು ಮತ್ತು ಇತರ ತಂಬಾಕು ಪದಾರ್ಥ (ನಿಷೇಧ) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಸವನ್ನು ಸಮರ್ಪಕವಾಗಿ ವಿಂಗಡಿಸಬೇಕು ಎಂದು ಕೆಫೆ ಕಾಫಿ ಡೇ ಬಳಗದ ಮಳಿಗೆಗಳಿಗೆ ಸೂಚನೆ ನೀಡಿದ್ದೇವೆ’ ಎಂದರು.

ADVERTISEMENT

ಕೆಂಗೇರಿ ವಾರ್ಡ್‌ನಲ್ಲಿ ವಿವಿಧ ಮಳಿಗೆಗಳಿಗೆ ದಾಳಿ ಮಾಡಿ ಪ್ಲಾಸ್ಟಿಕ್‌ ಪರಿಕರಗಳನ್ನು ವಶಕ್ಕೆ ಪಡೆದಿರುವ ಆರೋಗ್ಯ ಅಧಿಕಾರಿಗಳು ಈ ಸಂಬಂಧ ₹ 8,700 ದಂಡ ವಿಧಿಸಿದ್ದಾರೆ. ಹೂಡಿ ವಾರ್ಡ್‌ನ ರಾಜಪಾಳ್ಯದ ವಸತಿ ಪ್ರದೇಶದಲ್ಲಿದ್ದ ವ್ಯಾಪಾರ ಮಳಿಗೆಗಳನ್ನು ಮುಚ್ಚಿಸಿದ್ದಾರೆ ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.