ADVERTISEMENT

ಬೆಂಗಳೂರು | ಸಿಗ್ನಲ್ ಜಂಪ್‌ ಮಾಡಿ ಆಟೊಗೆ ಡಿಕ್ಕಿ: ಕಾಲ್‌ ಸೆಂಟರ್ ಉದ್ಯೋಗಿ ಸಾವು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 19:25 IST
Last Updated 29 ಸೆಪ್ಟೆಂಬರ್ 2024, 19:25 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನಗರದ ಕಾಫಿ ಬೋರ್ಡ್‌ ಜಂಕ್ಷನ್‌ ಸಮೀಪ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಲಾರಿಯೊಂದು ಆಟೊಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಮೃತಪಟ್ಟಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ADVERTISEMENT

ಘಟನೆ ಬಳಿಕ ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ ಚಾಲಕ ಸಕಲೇಶಪುರದ ಅಭಿ ಎಂಬುವವರನ್ನು ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

ಉಪ್ಪಾರಪೇಟೆಯಲ್ಲಿ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಶಾಲಿನಿ (24) ಮೃತರು. ಬೆನ್ಸ್ನ್ ಟೌನ್‌ನಲ್ಲಿ ನೆಲೆಸಿದ್ದ ಶಾಲಿನಿ, ‘ನಮ್ಮ ಯಾತ್ರಿ’ ಆ್ಯಪ್ ಮೂಲಕ ಮೆಜೆಸ್ಟಿಕ್‌ಗೆ ಆಟೊ ಬುಕ್ ಮಾಡಿದ್ದರು. ಚಾಲಕ ಇಮ್ರಾನ್ ಅವರು ಮುಂಜಾನೆ ನಾಲ್ಕು ಗಂಟೆಗೆ ಶಾಲಿನಿ ಅವರನ್ನು ಕರೆದೊಯ್ಯುತ್ತಿದ್ದಾಗ ಘಟನೆ ಸಂಭವಿಸಿದೆ.

ಕಾಫಿ ಬೋರ್ಡ್‌ ಜಂಕ್ಷ್‌ನ್ ಬಳಿ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೊ ಚಾಲಕ ಕೆಳಕ್ಕೆ ಬಿದ್ದಿದ್ದಾರೆ. ಯುವತಿ ಆಟೊದೊಳಗೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ .‌

‘ನಿದ್ರೆಯ ಮಂಪರಿನಲ್ಲಿ ಸಿಗ್ನಲ್ ಜಂಪ್ ಮಾಡಿ ಆಟೊಗೆ ಡಿಕ್ಕಿ ಹೊಡೆದೆ’ ಎಂದು ಲಾರಿ ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಶಾಲಿನಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೇರಳದಿಂದ ಬಂದಿದ್ದ ಪೋಷಕರು  ಮೃತದೇಹ ಪಡೆದು, ಅಂತ್ಯಸಂಸ್ಕಾರ ನಡೆಸಿದರು. 

ಈ ಘಟನೆ ಸಂಬಂಧ ಶಾಲಿನಿ ಅವರ ದೂರದ ಸಂಬಂಧಿಯೊಬ್ಬರು ಲಾರಿ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.

‘ಶಾಲಿನಿ ಅವರು ನನ್ನ ಸಹೋದರನ ಪತ್ನಿಯ ಸಂಬಂಧಿ. ಕೇರಳದಲ್ಲಿರುವ ಸಹೋದರ ಬೆಳಿಗ್ಗೆ 6 ಗಂಟೆಗೆ ಕರೆ ಮಾಡಿ ಅಪಘಾತದ ವಿಷಯ ತಿಳಿಸಿದರು. ಆಸ್ಪತ್ರೆಗೆ ಭೇಟಿ ನೀಡಿ ನೋಡಿದಾಗ ಶಾಲಿನಿ ಅವರ ಮುಖ ಸಂಪೂರ್ಣ ಜಜ್ಜಿ, ಗುರುತಿಸಲಾಗದ ಸ್ಥಿತಿ ತಲುಪಿತ್ತು. ಎಡ ಮತ್ತು ಬಲ ತೋಳು ಮುರಿದಿತ್ತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.