ADVERTISEMENT

ಕರೆ ಮಾರ್ಪಾಡು: ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 22:47 IST
Last Updated 11 ಜೂನ್ 2021, 22:47 IST
ಟೆಲಿಫೋನ್‌ ಎಫ್‌ಸಿಟಿ ಬಾಕ್ಸ್‌–ಸಾಂದರ್ಭಿಕ ಚಿತ್ರ
ಟೆಲಿಫೋನ್‌ ಎಫ್‌ಸಿಟಿ ಬಾಕ್ಸ್‌–ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡಿ ಕೇಂದ್ರ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಆರೋಪದಡಿ ನಗರದ ಸಿಸಿಬಿ ಪೊಲೀಸರು ಬಂಧಿಸಿರುವ ಇಬ್ಬರು ಆರೋಪಿಗಳ ಹಿನ್ನೆಲೆ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಮಾಹಿತಿ ಕಲೆಹಾಕುತ್ತಿವೆ.

ಸೇನೆಯ ಗುಪ್ತಚರ ವಿಭಾಗ ನೀಡಿದ್ದ ಮಾಹಿತಿ ಆಧರಿಸಿ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಬಿಟಿಎಂ ಬಡಾವಣೆಯಲ್ಲಿ ವಾಸವಿದ್ದ ಕೇರಳದ ಇಬ್ರಾಹಿಂ ಪುಲ್ಲಟ್ಟಿ (36) ಹಾಗೂ ತಮಿಳುನಾಡಿನ ಗೌತಮ್ (27) ಎಂಬುವರನ್ನು ಬಂಧಿಸಿದ್ದಾರೆ. ಅವರಿಂದ ಕರೆಗಳ ಮಾರ್ಪಾಡು ಮಾಡಲು ಬಳಸುತ್ತಿದ್ದ ಎಫ್‌ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್ ಹಾಗೂ 900 ಸಿಮ್‌ಕಾರ್ಡ್‌ಗಳನ್ನು ಜಪ್ತಿ ಮಾಡಿದ್ದಾರೆ.

‘ಬಂಧಿತ ಆರೋಪಿಗಳು ದೇಶದ ಭದ್ರತೆಗೆ ಧಕ್ಕೆ ತರುವ ಕೆಲಸದಲ್ಲಿ ನಿರತರಾಗಿದ್ದ ಸಂಗತಿ ಗೊತ್ತಾಗಿದೆ. ಅದನ್ನು ಆಧರಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಕೇಂದ್ರ ಗುಪ್ತದಳ ಅಧಿಕಾರಿಗಳು, ನಗರಕ್ಕೆ ಬಂದು ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ದೇಶದ ಆಂತರಿಕ ಶಾಂತಿ ಕದಡಲು ಸಂಚು ರೂಪಿಸುತ್ತಿದ್ದವರ ಜೊತೆಯಲ್ಲಿ ಆರೋಪಿಗಳು ಶಾಮೀಲಾಗಿರುವ ಶಂಕೆಯೂ ಇದೆ. ಹವಾಲಾ ವ್ಯವಹಾರವೂ ನಡೆದಿರುವುದರಿಂದ ರಾಜ್ಯದ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಅಧಿಕಾರಿಗಳು ಸಹ ಆರೋಪಿಗಳ ಹಿನ್ನೆಲೆ ಕೆದಕುತ್ತಿದ್ದಾರೆ’ ಎಂದೂ ಮೂಲಗಳು ಹೇಳಿವೆ.

‘ಬಿಟಿಎಂ ಬಡಾವಣೆಯ ಆರು ಸ್ಥಳಗಳಲ್ಲಿ ಆರೋಪಿಗಳು ಎಫ್‌ಸಿಟಿ ಬಾಕ್ಸ್ ಅಳವಡಿಸಿದ್ದರು. ಕೊರಿಯರ್ ಮೂಲಕ ಸಿಮ್‌ ಕಾರ್ಡ್‌ಗಳನ್ನು ತರಿಸಿಕೊಂಡು ಬಳಕೆ ಮಾಡುತ್ತಿದ್ದರು. ಇವರ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.