ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡದಿರುವುದಕ್ಕೆ ಕಾರಣ ಕೇಳಿ ನೀಡಲಾಗಿದ್ದ ನೋಟಿಸ್‌ಗೆ ಉತ್ತರಿಸದ ವಿಕ್ರಮ್ ಆಸ್ಪತ್ರೆ ಹಾಗೂ ಅಪೊಲೋ ಆಸ್ಪತ್ರೆಗೆ (ಜಯನಗರ ಶಾಖೆ), 48 ಗಂಟೆಗಳು ಹೊರರೋಗಿಗಳ ವಿಭಾಗವನ್ನು (ಒಪಿಡಿ) ಸ್ಥಗಿತ ಮಾಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಿಗದಿತ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳು ಹಾಗೂ ಸೋಂಕು ಶಂಕಿತರನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು. ತಮ್ಮ ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಹಾಸಿಗೆಗಳನ್ನು ಶಿಫಾರಸ್ಸು ಮಾಡುವ ರೋಗಿಗಳಿಗೆ ಮೀಸಲಿಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಈ ಆದೇಶವನ್ನು ವಿಕ್ರಮ್ ಹಾಗೂ ಅಪೊಲೋ ಆಸ್ಪತ್ರೆಯ ಜಯನಗರ ಶಾಖೆ ಪಾಲಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಸ್ಪತ್ರೆಗಳಿಗೆ ಸೋಮವಾರ ಭೇಟಿ ನೀಡಿ, ಕೆಪಿಎಂಇ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
ಈ ಬಗ್ಗೆ ಒಂದು ದಿನದೊಳಗೆ ಸಮಜಾಯಿಷಿ ನೀಡಬೇಕು ಎಂದ ಸೂಚಿಸಿತ್ತು. ಆದರೆ, ಆಸ್ಪತ್ರೆಗಳು ಇದಕ್ಕೆ ಉತ್ತರ ನೀಡಿಲ್ಲ. ಹೀಗಾಗಿ ಒಪಿಡಿ ಸ್ಥಗಿತ ಮಾಡುವಂತೆ ಆದೇಶ ಹೊರಡಿಸಲಾಗಿದೆ.
48 ಗಂಟೆಗಳವರೆಗೆ ಒಪಿಡಿ ಸ್ಥಗಿತ ಮಾಡದಿದ್ದಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆ 1897, ಕೆಪಿಎಂಇ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ತಮ್ಮ ಸಂಸ್ಥೆಯ ಕೆಪಿಎಂಇ ಪರವಾನಗಿಯನ್ನು ರದ್ದುಗೊಳಿಸುವ ಜತೆಗೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಹೊಸದಾಗಿ ಹೊರ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಸರ್ಕಾರ ನಿರ್ಬಂಧಿಸಿದೆ. ಹೊರ ರೋಗಿಗಳ ವಿಭಾಗವನ್ನು 48 ಗಂಟೆ ಸೀಲ್ ಡೌನ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.