ADVERTISEMENT

ಕ್ಯಾನ್ಸರ್: ರೋಗಿಗಳಿಗಾಗಿ ಕೂದಲು ದಾನ ಮಾಡಿದ ಬಾಲಕಿ

​ಪ್ರಜಾವಾಣಿ ವಾರ್ತೆ
Published 28 ಮೇ 2023, 0:25 IST
Last Updated 28 ಮೇ 2023, 0:25 IST
ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ಬಾಲಕಿ
ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ಬಾಲಕಿ   

ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗಾಗಿ 10 ವರ್ಷದ ಬಾಲಕಿ ಸೇರಿ 15ಕ್ಕೂ ಅಧಿಕ ಮಂದಿ ನಗರದಲ್ಲಿ ಕೂದಲನ್ನು ದಾನ ಮಾಡುವ ಮೂಲಕ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.

ಇಂಡಿಯನ್ ಕ್ಯಾನ್ಸರ್ ಸೊಸೈಟಿ ಬೆಂಗಳೂರು ಮತ್ತು ಬೆಂಗಳೂರು ಹೇರ್ ಡೊನೇಷನ್ ಸಹಯೋಗದಲ್ಲಿ ಮಿಲಾಪ್ ವೇದಿಕೆ ಶನಿವಾರ ಹಮ್ಮಿಕೊಂಡ ರಾಷ್ಟ್ರೀಯ ಕ್ಯಾನ್ಸರ್ ಗೆದ್ದವರ ದಿನ ಕಾರ್ಯಕ್ರಮದಲ್ಲಿ ಗುಣಮುಖರನ್ನು ಗೌರವಿಸಲಾಯಿತು. ಕೂದಲು ದಾನದ ಬಗ್ಗೆ ಹಲವರು ಪ್ರತಿಜ್ಞೆ ಕೈಗೊಂಡರು. ಎಚ್‌ಎಸ್ ಸಲೂನ್‌ನಲ್ಲಿ ಹತ್ತು ವರ್ಷದ ಲಿಪಿ ಸಿಂಡೆರೆಲ್ಲಾ ಸೇರಿ ಕೆಲವರು ಕೂದಲನ್ನು ದಾನವಾಗಿ ನೀಡಿದರು. ರೋಗವನ್ನು ಜಯಿಸಿದವರು ನಮ್ಮ ಅನುಭವವನ್ನು ಹಂಚಿಕೊಂಡರು.

ಮಿಲಾಪ್ ವೇದಿಕೆ ಸಹ ಸಂಸ್ಥಾಪಕ ಅನೊಜ್ ವಿಶ್ವನಾಥನ್, ‘ದೇಶದಲ್ಲಿ ಕಳೆದ ವರ್ಷ 14.61 ಲಕ್ಷ ಕ್ಯಾನ್ಸರ್ ಪ್ರಕರಣಗಳನ್ನು ಗುರುತಿಸಲಾಗಿತ್ತು. ಸರಾಸರಿ ಒಂಬತ್ತು ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮಹಿಳೆಯರು ಹೆಚ್ಚಾಗಿ ಸ್ತನ ಕ್ಯಾನ್ಸರ್, ಪುರುಷರು ಶ್ವಾಸಕೋಶ ಕ್ಯಾನ್ಸರ್ ಹಾಗೂ ಮಕ್ಕಳು ಲಿಂಫಾಯ್ಡ್ ಲ್ಯೂಕೇಮಿಯಾಕ್ಕೆ ಒಳಗಾಗುತ್ತಿದ್ದಾರೆ. 2020ಕ್ಕೆ ಹೋಲಿಸಿದರೆ, 2025ರ ವೇಳೆ ಕ್ಯಾನ್ಸರ್ ಪ್ರಕರಣಗಳು ಶೇ 12.8ರಷ್ಟು ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ’ ಎಂದು ಹೇಳಿದರು. 

ADVERTISEMENT

ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕಿ ಡಾ.ಜವೇರಾ ಫಾತಿಮಾ, ‘ದೇಶವು ಕ್ಯಾನ್ಸರ್ ಆರೈಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಕ್ಯಾನ್ಸರ್ ಕಾಯಿಲೆ ಎದುರಿಸಲು ಮಾನಸಿಕ ಶಕ್ತಿಯೂ ಅಗತ್ಯ. ಬೇಗ ಆಸ್ಪತ್ರೆಗಳಿಗೆ ತೆರಳಿ, ತಪಾಸಣೆ ಮಾಡಿಸಿಕೊಂಡಲ್ಲಿ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಬಹುದು. ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಕಾಯಿಲೆಯನ್ನು ವಾಸಿ ಮಾಡಲು ಸಾಧ್ಯ. ಬದಲಾದ ಜೀವನ ಶೈಲಿ, ಪಾಶ್ಚಿಮಾತ್ಯ ಆಹಾರ ಪದ್ಧತಿ, ಧೂಮಪಾನದಂತಹ ವ್ಯಸನಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.