ಬೆಂಗಳೂರು: ‘ಮಕ್ಕಳಲ್ಲಿಯೂ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ವಾರ್ಷಿಕ ಸರಾಸರಿ 25,939 ಮಕ್ಕಳು ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ ಎಂದು ಕ್ಯಾನ್ಸರ್ ತಜ್ಞರು ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಪ್ರಯುಕ್ತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಹಾಗೂ ಮಕ್ಕಳ ಕ್ಯಾನ್ಸರ್ ರಿಜಿಸ್ಟ್ರಿ ಕಾರ್ಯಾಗಾರದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ಪ್ರಕಾರಗಳು, ಪ್ರಕರಣಗಳ ಹೆಚ್ಚಳದ ಬಗ್ಗೆ ತಜ್ಞರು ವಿಷಯ ಮಂಡಿಸಿದರು.
‘ಕ್ಯಾನ್ಸರ್ ಪೀಡಿತ ಮಕ್ಕಳಲ್ಲಿ ಹೆಚ್ಚಿನವರು ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ ಮತ್ತು ಲಿಂಪೋಮಾ), ಮಿದುಳು ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಸಂಸ್ಥೆಯ ನೋಂದಣಿ ಪ್ರಕಾರ ಮಕ್ಕಳ ಕ್ಯಾನ್ಸರ್ ವಿಭಾಗದಲ್ಲಿ ಪ್ರತಿ ವರ್ಷ ಸರಾಸರಿ 400ರಿಂದ 500 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಸಂಸ್ಥೆಯ ಹೊರ ರೋಗಿ ವಿಭಾಗದಲ್ಲಿ ಕಳೆದ ವರ್ಷ 18 ಸಾವಿರ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ’ ಎಂದು ಸಂಸ್ಥೆಯ ವೈದ್ಯರು ತಿಳಿಸಿದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ.ರವಿ ಅರ್ಜುನ್, ‘ದೇಹದಲ್ಲಿ ಯಾವುದೇ ಶಂಕಿತ ಗೆಡ್ಡೆ ಇದ್ದರೆ ತಪಾಸಣೆಗೆ ಒಳಪಡಬೇಕು. ತಡವಾಗಿ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ನೀಡಿದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಕ್ಯಾನ್ಸರ್ ನೋಂದಣಿ ದತ್ತಾಂಶದ ಪ್ರಕಾರ ದೇಶದಲ್ಲಿ ವಾರ್ಷಿಕ 18 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಸದ್ಯ 2.3 ಲಕ್ಷ ಸಕ್ರಿಯ ಕ್ಯಾನ್ಸರ್ ಪ್ರಕರಣಗಳಿವೆ. ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದರೆ ಸೂಕ್ತ ಚಿಕಿತ್ಸೆಯ ಮೂಲಕ ರೋಗವನ್ನು ಗುಣಪಡಿಸಬಹುದಾಗಿದೆ. ಆದ್ದರಿಂದ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಸಂಶೋಧನೆಗೆ ಸಹಕಾರಿ: ರಾಷ್ಟ್ರೀಯ ರೋಗ ಸೂಚನಾ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ (ಎನ್‌ಸಿಡಿಐಆರ್) ನಿರ್ದೇಶಕ ಡಾ. ಪ್ರಶಾಂತ್ ಮಾಥುರ್, ‘ಕ್ಯಾನ್ಸರ್ ಪ್ರಕರಣಗಳ ನೋಂದಣಿಯನ್ನು ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಜಾರಿಗೊಳಿಸಬೆಕು. ಇದರಿಂದ ಪರಿಣಾಮಕಾರಿ ಚಿಕಿತ್ಸೆ ಹಾಗೂ ಸಂಶೋಧನೆ ಸಾಧ್ಯವಾಗಲಿದೆ. ವೈಜ್ಞಾನಿಕ ವರದಿಗಳ ವಿಶ್ಲೇಷಣೆಗೆ ಸಂಬಂಧಿಸಿದಂತೆಯೂ ಕ್ಯಾನ್ಸರ್ ನೋಂದಣಿಯು ವೈದ್ಯರಿಗೆ ಅನುಕೂಲವಾಗಲಿದೆ. ಆದ್ದರಿಂದ ಕ್ಯಾನ್ಸರ್ ನೋಂದಣಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದರು.
ಬಳಿಕ ಮಕ್ಕಳ ಕ್ಯಾನ್ಸರ್ ಹಾಗೂ ಜಾಗೃತಿ ಕುರಿತು ವೈದ್ಯಕೀಯ ತಜ್ಞರು ವಿಚಾರ ಮಂಡಿಸಿದರು. ಸಂಸ್ಥೆಯ ಮಕ್ಕಳ ಗಂಥಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್, ಚೆನ್ನೈನ ಕ್ಯಾನ್ಸರ್ ಸಂಸ್ಥೆಯ ಡಾ. ರಾಜಾರಾಮನ್ ಸ್ವಾಮಿನಾಥನ್, ಸಂಸ್ಥೆಯ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ.ಟಿ.ನವೀನ್ ಹಾಗೂ ಡಾ.ಅತುಲ್ ಶ್ರೀವಾತ್ಸವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.