ADVERTISEMENT

ಕ್ಯಾನ್ಸರ್ ಪ್ರಕರಣ: ನಗರದಲ್ಲಿ ವಾರ್ಷಿಕ ಶೇ 1ರಷ್ಟು ಹೆಚ್ಚಳ

ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ ವಿಶ್ಲೆಷಣೆ

ವರುಣ ಹೆಗಡೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
   

ಬೆಂಗಳೂರು: ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ, ತಂಬಾಕು ಉತ್ಪನ್ನಗಳ ಸೇವನೆ ಸೇರಿ ವಿವಿಧ ಕಾರಣಗಳಿಂದ ನಗರದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಪುರುಷರು ಹಾಗೂ ಮಹಿಳೆಯರಲ್ಲಿ ವಾರ್ಷಿಕ ಶೇ 1 ರಷ್ಟು ಏರಿಕೆಯಾಗುತ್ತಿದೆ. 

ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿಯ (ಪಿಬಿಸಿಆರ್) ವಿಶ್ಲೇಷಣೆಯಿಂದ ಇದು ದೃಢಪಟ್ಟಿದೆ. ಕ್ಯಾನ್ಸರ್ ದತ್ತಾಂಶಗಳನ್ನು ಸಂಗ್ರಹಿಸಿ, ಹೊಸ ಪ್ರಕರಣಗಳ ಏರಿಳಿತವನ್ನು ಪಿಬಿಸಿಆರ್ ನಿರ್ಧರಿಸುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಡಿ (ಐಸಿಎಂಆರ್) ಈ ನೋಂದಣಿಯು ಕಾರ್ಯನಿರ್ವಹಿಸುತ್ತಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಚಿಕಿತ್ಸಾಲಯ, ಡಯಾಗ್ನಾಸ್ಟಿಕ್ ಸೆಂಟರ್ ಸೇರಿ ವಿವಿಧ ಮೂಲಗಳಿಂದ ಕ್ಯಾನ್ಸರ್ ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿ ಕ್ಯಾನ್ಸರ್ ಚಿಕಿತ್ಸೆಗೆ ಮೀಸಲಾದ ಪ್ರಮುಖ ಆಸ್ಪತ್ರೆಗಳಲ್ಲಿ ವರದಿಯಾದ ಪ್ರಕರಣಗಳೂ ಸೇರಿವೆ. ಈ ಮಾಹಿತಿಗಳನ್ನು ಆಧರಿಸಿ ನಗರದಲ್ಲಿ ಕ್ಯಾನ್ಸರ್ ಪ್ರಕರಣಗಳ ಏರಿಕೆಯನ್ನು ಗುರುತಿಸಲಾಗಿದೆ. 

ADVERTISEMENT

ಪಿಬಿಸಿಆರ್ ಪ್ರಕಾರ ನಗರದಲ್ಲಿ ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಪೇಟ್, ಬಾಯಿ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಸ್ತನ ಮತ್ತು ಗರ್ಭಕಂಠದ, ಗರ್ಭಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ.

ಮಹಿಳೆಯರಲ್ಲೇ ಅಧಿಕ: ವರ್ಷವಾರು ಪುರುಷರು ಹಾಗೂ ಮಹಿಳೆಯರಲ್ಲಿ ವರದಿಯಾಗುತ್ತಿರುವ ಕ್ಯಾನ್ಸರ್ ಪ್ರಕರಣಗಳ ಆಧಾರದಲ್ಲಿ ಈ ವರ್ಷಾಂತ್ಯಕ್ಕೆ ಹಾಗೂ ಮುಂದಿನ ವರ್ಷ ವರದಿಯಾಗುವ ಪ್ರಕರಣಗಳನ್ನು ಪಿಬಿಸಿಆರ್ ಅಂದಾಜಿಸಿದೆ. ಕಳೆದ ವರ್ಷ ನಗರದಲ್ಲಿ 18,562 ಪ್ರಕರಣಗಳು ಹೊಸದಾಗಿ ದೃಢಪಟ್ಟಿದ್ದು, 2025ರ ವೇಳೆಗೆ ಈ ಪ್ರಕರಣಗಳ ಸಂಖ್ಯೆ 20 ಸಾವಿರದ ಗಡಿ ದಾಟಲಿದೆ ಎಂದು ಅಂದಾಜಿಸಿದೆ. ಪುರುಷರಿಗಿಂತ ಮಹಿಳೆಯರಲ್ಲೇ ಕ್ಯಾನ್ಸರ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ.  

‘ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಧೂಮಪಾನವೇ ಕ್ಯಾನ್ಸರ್ ಹೊಸ ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕಿದೆ. ಪ್ರಾಥಮಿಕ ಹಂತದಲ್ಲೇ ಕಾನ್ಸರ್ ಪತ್ತೆಯಾದರೆ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಜನರೂ ಉತ್ತಮ ಜೀವನಶೈಲಿ, ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಿದೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವೈದ್ಯರೊಬ್ಬರು ತಿಳಿಸಿದರು.

ಮರಣ ಪ್ರಕರಣಗಳು ಏರಿಕೆ

ಪಿಬಿಸಿಆರ್ ಪ್ರಕಾರ ತಡವಾಗಿ ಕ್ಯಾನ್ಸರ್ ಪತ್ತೆ ಹಾಗೂ ಆಸ್ಪತ್ರೆ ದಾಖಲಾತಿಯಲ್ಲಿ ವಿಳಂಬದಿಂದಾಗಿ ಕ್ಯಾನ್ಸರ್ ಮರಣ ಪ್ರಕರಣಗಳೂ ನಗರದಲ್ಲಿ ಏರಿಕೆಯಾಗುತ್ತಿವೆ. 2015ರಲ್ಲಿ ನಗರದಲ್ಲಿ ಕ್ಯಾನ್ಸರ್‌ನಿಂದ 4027 ಮಂದಿ ಮೃತಪಟ್ಟಿದ್ದರು. 2023ರಲ್ಲಿ ಈ ಸಂಖ್ಯೆ 5481ಕ್ಕೆ ತಲುಪಿತ್ತು. 2024ರ ಅಂತ್ಯಕ್ಕೆ 5696 ಹಾಗೂ 2025ರ ಅಂತ್ಯಕ್ಕೆ 5920ರಷ್ಟು ಸಾವಿನ ಪ್ರಕರಣಗಳು ಸಂಭವಿಸಬಹುದು ಎಂದು ವಿಶ್ಲೇಷಿಸಲಾಗಿದೆ. ಕಳೆದ ವರ್ಷ ವಿವಿಧ ಪ್ರಕಾರದ ಕ್ಯಾನ್ಸರ್‌ನಿಂದ 2687 ಪುರುಷರು ಮೃತಪಟ್ಟರೆ 2793 ಮಹಿಳೆಯರು ಇದೇ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ.

ವಾಯುಮಾಲಿನ್ಯ ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥಗಳ ಸೇವನೆಯಿಂದಲೂ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ತಂಬಾಕು ಉತ್ಪನ್ನಗಳ ಸೇವನೆಯಿಂದಲೇ ಹೆಚ್ಚಿನವರು ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ
-ಡಾ.ಸಿ.ರಾಮಚಂದ್ರ, ಕ್ಯಾನ್ಸರ್ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.