ADVERTISEMENT

ನೇಮಕಾತಿ ವಿಳಂಬ: ಕೆಪಿಎಸ್‌ಸಿ ಎದುರು ‌ಅಭ್ಯರ್ಥಿ‌ಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 11:35 IST
Last Updated 24 ಜೂನ್ 2024, 11:35 IST
   

ಬೆಂಗಳೂರು: ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ ಅಡಿಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಖಾಲಿ ಇರುವ ಕಿರಿಯ ತರಬೇತಿ ಅಧಿಕಾರಿಗಳ (ಜೆಟಿಒ) ಹುದ್ದೆಯ ಆಯ್ಕೆ ಪಟ್ಟಿಯನ್ನು ಹೈಕೋರ್ಟ್‌ ಆದೇಶದಂತೆ  ಪರಿಷ್ಕರಿಸಿ ತಾತ್ಕಾಲಿಕ ಪಟ್ಟಿ ಪ್ರಕಟಿಸಿದರೂ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಎಸ್‌ಸಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಕೆಪಿಎಸ್‌ಸಿ ಮುಂಭಾಗದಲ್ಲಿ ನೂರಾರು ಅಭ್ಯರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

2019ರಲ್ಲಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಯನ್ನು ಹೈಕೋರ್ಟ್‌ ನಿರ್ದೇಶನದಂತೆ ಕೆಪಿಎಸ್‌ಸಿ ಪರಿಷ್ಕರಿಸಿದೆ. ಆದರೆ, ಅಂತಿಮ ಪಟ್ಟಿ ಪ್ರಕಟಿಸಲು ಕೆಪಿಎಸ್‌ಸಿ ವಿಳಂಬ ಮಾಡುತ್ತಿರುವುದರಿಂದ, ಹುದ್ದೆಗೆ ಆಯ್ಕೆಯಾದರೂ ಕೆಲಸ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗೋಳಾಡಿದರು.

ಐಟಿಐಗಳಲ್ಲಿ 23 ವಿವಿಧ ವೃಂದಗಳಲ್ಲಿ ಖಾಲಿ ಇರುವ ಜೆಟಿಒಗಳ ನೇಮಕಾತಿಗೆ 2018 ಫೆ. 19 ರಂದು ಕೆಪಿಎಸ್‍ಸಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಿದ್ದ 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ 2018 ಡಿ. 27 ರಿಂದ 2019 ಜ. 3ರವರೆಗೆ ಪರೀಕ್ಷೆ ನಡೆದಿತ್ತು. 399 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿತ್ತು. ಆದರೆ, ಅತಿ ಹೆಚ್ಚು ಅಂಕ ಪಡೆದಿದ್ದರೂ ಸೇವಾನುಭವ ಪ್ರಮಾಣಪತ್ರದ ಕಾರಣಕ್ಕೆ ಆಯ್ಕೆಯಾದವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ADVERTISEMENT

2023ರ ಜುಲೈ 24ರಂದು ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್‌, ಪಟ್ಟಿ ಪರಿಷ್ಕರಿಸಲು ಸೂಚಿಸಿತ್ತು. ಅದರಂತೆ, ಇದೇ ಮೇ 7ರಂದು ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಹೈಕೋರ್ಟ್‌ ಆದೇಶ ನೀಡಿ 11 ತಿಂಗಳು ಕಳೆದಿದೆ. ಆದರೆ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಎಸ್‌ಸಿಗೆ ಇನ್ನೂ ಸಾಧ್ಯವಾಗಿಲ್ಲ. ಈ ಹುದ್ದೆಗಳಿಗೆ ಮಾಜಿ ಸೈನಿಕ ಕೋಟಾದಲ್ಲಿ ಆಯ್ಕೆಯಾದ ಕೆಲವರ ವಯಸ್ಸು 57 ದಾಟಿದೆ. ವಯೋಮಿತಿ ಸಡಿಲಿಕೆಯ ಅವಕಾಶದಲ್ಲಿ ಆಯ್ಕೆ ಆದವರ ವಯಸ್ಸು 49 ದಾಟಿದೆ. ಕೆಲವರು ಮೃತಪಟ್ಟಿದ್ದಾರೆ. ಕೆಪಿಎಸ್‌ಸಿಯ ವಿಳಂಬ ಧೋರಣೆಗೆ ಬೇಸತ್ತು, ದಯಾ ಮರಣಕ್ಕೆ ಅನುಮತಿ ನೀಡುವಂತೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಪ್ರತಿಭಟನೆ ನಿರತರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.