ADVERTISEMENT

ಬೆಂಗಳೂರು | ಹೆದ್ದಾರಿಯಲ್ಲಿ ಸುಟ್ಟ ಕಾರು: ಚಾಲಕ ಸಜೀವ ದಹನ

ಅಂಚೆಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 20:11 IST
Last Updated 26 ಡಿಸೆಂಬರ್ 2023, 20:11 IST
ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಾರು
ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಾರು   

ಪೀಣ್ಯ– ದಾಸರಹಳ್ಳಿ: ಸಮೀಪದ ಅಂಚೆಪಾಳ್ಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬೆಂಕಿಯಿಂದ ಹೊತ್ತಿ ಉರಿದಿದ್ದು, ಕಾರಿನಲ್ಲಿ ಸಿಲುಕಿ ಚಾಲಕ ಅನಿಲ್‌ಕುಮಾರ್ (48) ಸಜೀವವಾಗಿ ದಹನವಾಗಿದ್ದಾರೆ.

‘ಜಾಲಹಳ್ಳಿ ಬಳಿಯ ಶೆಟ್ಟಿಹಳ್ಳಿ ನಿವಾಸಿ ಅನಿಲ್‌ಕುಮಾರ್, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಮಾರುತಿ ಎಕ್ಸ್‌ಎಲ್‌–6 ಕಾರಿನಲ್ಲಿ (ಕೆಎ 04 ಎನ್‌ಬಿ 5879) ಮಂಗಳವಾರ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಹೇಳಿದರು.

‘ಅನಿಲ್‌ಕುಮಾರ್ ಅವರು ಕೆಲಸ ನಿಮಿತ್ತ ನೆಲಮಂಗಲಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ವಾಪಸು ಶೆಟ್ಟಿಹಳ್ಳಿಯತ್ತ ರಾಷ್ಟ್ರೀಯ ಹೆದ್ದಾರಿ ಮೂಲಕ ಕಾರಿನಲ್ಲಿ ಬರುತ್ತಿದ್ದರು. ಅಂಚೆಪಾಳ್ಯದ ಟೋಲ್‌ಗೇಟ್‌ ಬಳಿ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು.’

ADVERTISEMENT

‘ಬೆಂಕಿ ಕಂಡು ಗಾಬರಿಗೊಂಡಿದ್ದ ಅನಿಲ್‌ಕುಮಾರ್, ಕಾರು ನಿಲ್ಲಿಸಿ ಇಳಿಯಲು ಮುಂದಾಗಿದ್ದರು. ಆದರೆ, ಕಾರಿನ ಬಾಗಿಲುಗಳ ಲಾಕ್ ಆಗಿದ್ದವು. ಎಷ್ಟೇ ಪ್ರಯತ್ನಿಸಿದರೂ ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಹೊರಗೆ ಬರಲಾರದೇ ಅನಿಲ್‌ಕುಮಾರ್ ಕೂಗಾಡುತ್ತಿದ್ದರು. ಅಷ್ಟರಲ್ಲೇ ಬೆಂಕಿ ಕೆನ್ನಾಲಗೆ ಹೆಚ್ಚಾಗಿ, ಇಡೀ ಕಾರಿಗೆ ಆವರಿಸಿತ್ತು. ಅದೇ ಬೆಂಕಿಯಲ್ಲಿ ಸುಟ್ಟು ಅನಿಲ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

‘ಉರಿಯುತ್ತಿದ್ದ ಕಾರು ಕಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಸ್ಥಳದಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಹೇಳಿದರು.

ಸಾವಿನಲ್ಲಿ ಅನುಮಾನ: ‘ಕಾರಿನಲ್ಲಿ ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿತು ? ಕಾರಿನ ಲಾಕ್ ಏಕೆ ತೆರೆಯಲಿಲ್ಲ ? ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಅವರು ವರದಿ ನೀಡಿದ ನಂತರ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಪೊಲೀಸರು ತಿಳಿಸಿದರು.

‘ಅನಿಲ್‌ಕುಮಾರ್ ಸಾವು ಆಕಸ್ಮಿಕವೋ ಅಥವಾ ಬೇರೆ ಯಾವುದಾದರೂ ಬೇರೆ ಕಾರಣವಿದೆಯಾ ? ಕಾರಿನಲ್ಲಿ ಏನಾದರೂ ದೋಷವಿತ್ತೆ ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಕಾರಿನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಹೇಳಿದರು.

ಸಂಚಾರ ದಟ್ಟಣೆ: ಕಾರು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಇದರಿಂದಾಗಿ 5 ಕಿ.ಮೀ. ವರೆಗೂ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸುಟ್ಟ ಕಾರಿನ ಸುತ್ತ ಸೇರಿದ್ದ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.