ADVERTISEMENT

ನಕಲಿ ಎನ್‌ಒಸಿ ಸೃಷ್ಟಿಸಿ ಕಾರು ಮಾರಾಟ: ಆರೋಪಿಗಳ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 15:58 IST
Last Updated 16 ಜುಲೈ 2024, 15:58 IST
ಆಸ್ಟಿನ್‌ 
ಆಸ್ಟಿನ್‌    

ಬೆಂಗಳೂರು: ಸಾಲ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಕಾರುಗಳನ್ನು ಅಡಮಾನ ಇಟ್ಟುಕೊಂಡು, ಅವುಗಳಿಗೆ ನಕಲಿ ಎನ್‌ಒಸಿ ಸೃಷ್ಟಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಗೋವಾದ ಆಸ್ಟಿನ್ ಕಾರಾಡೋಸ್ ಅಲಿಯಾಸ್ ಚಿಂಟು(37) ಬೆಂಗಳೂರು ನಗರದ ಫ್ರೇಜರ್‌ಟೌನ್‌ ನಿವಾಸಿ ಸೈಯದ್ ರಿಯಾಜ್(35) ಬಂಧಿತರು.

ಆರೋಪಿಗಳಿಂದ ₹2.56 ಕೋಟಿ ಮೌಲ್ಯದ ರೇಂಜ್ ರೋವರ್, ಜಾಗ್ವಾರ್ ಸೇರಿದಂತೆ ವಿವಿಧ ಕಂಪನಿಯ 17 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಕಳವು ಮಾಡಿದ್ದ ಕಾರುಗಳು, ವಿಮೆ ಪಾವತಿಸದ ಹಾಗೂ ಸಾಲ ಬಾಕಿಯಿರುವ ವಾಹನಗಳನ್ನು ಆರೋಪಿ ಸೈಯದ್ ರಿಯಾಜ್ ಕಡಿಮೆ ಮೊತ್ತಕ್ಕೆ ಖರೀದಿ ಅಥವಾ ಅಡಮಾನ ಇಟ್ಟುಕೊಳ್ಳುತ್ತಿದ್ದರು. ನಂತರ, ಕಾರಿನ ಮೇಲೆ ಯಾವುದೇ ಸಾಲ ಇಲ್ಲದಂತೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಬ್ಯಾಂಕ್‌ಗಳು ಹಾಗೂ ಫೈನಾನ್ಸ್‌ಗಳಿಂದ ಎನ್‌ಒಸಿ ಪಡೆದು ಹೊರ ರಾಜ್ಯಗಳ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಇದಕ್ಕೆ ಕೆಲವರು ನೆರವು ನೀಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಇನ್ನೊಂದು ಪ್ರಕರಣದಲ್ಲಿ ಬಂಧಿತ ಆರೋಪಿ ಗೋವಾದ ಆಸ್ಟಿನ್, ಮೈಸೂರಿನ ಉದ್ಯಮಿಯೊಬ್ಬರಿಂದ ರೇಂಜ್ ರೋವರ್ ಕಾರು ಖರೀದಿಸಿದ್ದರು. ಈ ಕಾರಿಗೆ ಹರಿಯಾಣ ನೋಂದಣಿಯ ಕಾರಿನ ನಂಬರ್ ಪ್ಲೇಟ್ ಅಳವಡಿಸಿ, ನಕಲಿ ದಾಖಲೆ ಸೃಷ್ಟಿಸಿ ಹಣಕಾಸು ಸಂಸ್ಥೆಗಳಿಂದ ಎನ್‌ಒಸಿ ಪಡೆದು, ದೆಹಲಿಯ ಗ್ರಾಹಕರೊಬ್ಬರಿಗೆ ಮಾರಾಟ ಮಾಡಿದ್ದರು ಎಂದು ಹೇಳಿದರು.

ರಿಯಾಜ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.