ಬೆಂಗಳೂರು: ಲಿಂಫೋಮಾದಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದ 42 ವರ್ಷದ ವ್ಯಕ್ತಿಗೆ ಇಲ್ಲಿನ ನಾರಾಯಣ ಹೆಲ್ತ್ ಸಿಟಿ ವೈದ್ಯರು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಸಿಎಆರ್‌ಟಿ ಸೆಲ್ ಥೆರಪಿ’ ನೀಡಿದ್ದು, ವ್ಯಕ್ತಿ ಈಗ ಚೇತರಿಸಿಕೊಂಡಿದ್ದಾನೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ರಕ್ತ ವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ. ಶರತ್ ದಾಮೋದರ್, ‘ಹಮ್ಜಾ ಖಾನ್ ಅವರಿಗೆ 2020ರಲ್ಲಿ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಆ ವೇಳೆ ಅವರಿಗೆ ಹಲವು ಸುತ್ತುಗಳ ಕಿಮೊಥೆರಪಿ ನೀಡಲಾಗಿತ್ತು. 2022ರ ಫೆಬ್ರುವರಿಯಲ್ಲಿ ಅವರಿಗೆ ಕ್ಯಾನ್ಸರ್ ಮರುಕಳಿಸಿತ್ತು. ಈ ನಡುವೆ ಅವರು ಕೊರೊನಾ ಸೋಂಕಿತರಾಗಿ, ಇನ್ನಷ್ಟು ಅಸ್ವಸ್ಥರಾಗಿದ್ದರು. ಆಗ ಅವರಿಗೆ ಕಿಮೊಥೆರಪಿ ಹಾಗೂ ಕಾಂಡಕೋಶ ಕಸಿ ಚೇತರಿಕೆಗೆ ಸಹಕಾರಿಯಾಗಲಿಲ್ಲ. ಇದರಿಂದಾಗಿ ‘ಸಿಎಆರ್‌ಟಿ ಸೆಲ್ ಥೆರಪಿ’ ನೀಡಲಾಯಿತು. ನಾಲ್ಕನೆ ಹಂತದ ಕ್ಯಾನ್ಸರ್ ಎದುರಿಸುತ್ತಿದ್ದ ಅವರು ಚಿಕಿತ್ಸೆಯಿಂದಾಗಿ ಚೇತರಿಸಿಕೊಂಡಿದ್ದಾರೆ. ಲಿಂಫೋಮಾದಂತಹ ಕ್ಯಾನ್ಸರ್‌ಗಳಿಗೆ ಈ ಥೆರಪಿ ಪರಿಣಾಮಕಾರಿಯಾಗಿದೆ’ ಎಂದು ಹೇಳಿದರು.
‘ಕ್ಯಾನ್ಸರ್ ಮರುಕಳಿಸಿದಾಗ ಕಿಮೊಥೆರಪಿಯ ಆಯ್ಕೆ ಮಾತ್ರವೇ ಇತ್ತು. ಸಂಶೋಧನೆಗಳ ಫಲವಾಗಿ ಈಗ ಇಮ್ಯುನೋಥೆರಪಿ ಆಯ್ಕೆಯಿದೆ. ಅದರಲ್ಲಿ ಬರುವ ‘ಸಿಎಆರ್‌ಟಿ ಸೆಲ್ ಥೆರಪಿ’ಯನ್ನು ನೀಡಲಾಗಿದೆ. ಇದು ಸರಾಸರಿ ಮೂರು ವಾರಗಳ ಥೆರಪಿಯಾಗಿದೆ. ವ್ಯಕ್ತಿ ಚೇತರಿಸಿಕೊಂಡು ಒಂದೂವರೆ ವರ್ಷವಾಗಿದ್ದು, ಈ ಅವಧಿಯಲ್ಲಿ ವ್ಯಕ್ತಿಗೆ ಕ್ಯಾನ್ಸರ್ ಮರುಕಳಿಸಿಲ್ಲ. ಥೆರಪಿಗೆ ಸ್ವದೇಶಿ ವಿಧಾನ ಅನುಸರಿಸಿದ್ದರಿಂದ, ಅಮೆರಿಕಕ್ಕೆ ಹೋಲಿಸಿದರೆ ಹತ್ತನೇ ಒಂದು ಭಾಗದಷ್ಟು ವೆಚ್ಚ ಕಡಿಮೆಯಾಗಿದೆ’ ಎಂದು ತಿಳಿಸಿದರು.
‘ಈ ವಿಧಾನದಲ್ಲಿ ರೋಗಿಯ ಬಿಳಿ ರಕ್ತಕಣವನ್ನು ಹೊರತೆಗೆದು ಸಂಸ್ಕರಣೆ ಮಾಡಲಾಗುತ್ತದೆ. ಕ್ಯಾನ್ಸರ್ ಕೋಶಗಳನ್ನು ಗುರುತಿಸಿ, ನಾಶಗೊಳಿಸುವಂತೆ ಅದರ ವಂಶವಾಹಿಯಲ್ಲಿ ಬದಲಾವಣೆ ಮಾಡಲಾಗುತ್ತದೆ’ ಎಂದು ಹೇಳಿದರು.
ಹಮ್ಜಾ ಖಾನ್, ‘ಈ ಥೆರಪಿಯಿಂದ ನನಗೆ ಮರುಜೀವ ಸಿಕ್ಕಂತಾಗಿದೆ. ಮೊದಲಿನಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.