ADVERTISEMENT

ಸಾಫ್ಟ್‌ವೇರ್ ಬಳಸಿ ಕಾರು ಕಳವು: ಮೂವರು ವಶಕ್ಕೆ

ಬಾಗಲಗುಂಟೆ ಪೊಲೀಸರ ಕಾರ್ಯಾಚರಣೆ l ಮೂವರ ಬಂಧನ; 9 ಕಾರು ಜಪ್ತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 20:04 IST
Last Updated 10 ಅಕ್ಟೋಬರ್ 2019, 20:04 IST
   

ಬೆಂಗಳೂರು: ‘ಕೀ ಪ್ರೋಗ್ರಾಮಿಂಗ್’ ಸಾಫ್ಟ್‌ವೇರ್ ಬಳಸಿ ಕಾರುಗಳನ್ನು ಕದಿಯುತ್ತಿದ್ದ ಗ್ಯಾಂಗ್‌ನ ಮೂವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಂಗಳೂರಿನ ದಿಲೀಶ್ ಶಂಕರನ್ (38),ಶಾಜಿ ಕೇಶವನ್ (47) ಹಾಗೂ ಕೇರಳದ ಆಲಿ ಅಹಮ್ಮದ್ (39) ಬಂಧಿತ ಆರೋಪಿಗಳು. ಅವರಿಂದ 9 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಾಗಲಕುಂಟೆ ಠಾಣೆ ವ್ಯಾಪ್ತಿಯಲ್ಲಿ 5, ಅನ್ನಪೂರ್ಣೇಶ್ವರಿನಗರ, ಮಹಾಲಕ್ಷ್ಮಿಪುರದಲ್ಲಿ ತಲಾ 1 ಹಾಗೂ ಸುಬ್ರಹ್ಮಣ್ಯಪುರದಲ್ಲಿ 2 ಕಾರುಗಳನ್ನು ಆರೋಪಿಗಳು ಕದ್ದಿದ್ದರು. ಇನ್‌ಸ್ಪೆಕ್ಟರ್‌ ವೆಂಕಟೇಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.

ADVERTISEMENT

ಯೂಟ್ಯೂಬ್‌ ನೋಡಿ ಕಳವು: ‘ಯೂಟ್ಯೂಬ್‌ನಲ್ಲಿ ವಿಡಿಯೊ ನೋಡಿ ಕಳವು ಮಾಡುವ ವಿಧಾನ ತಿಳಿದು ಕಾರು ಕದಿಯುತ್ತಿದ್ದರು. ಅಂಥ ಕಾರುಗಳನ್ನು ಮಂಗಳೂರು ಹಾಗೂ ಕೇರಳದಲ್ಲಿ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದು ಹೇಳಿದರು.

ಸಿನಿಮೀಯ ರೀತಿ ಬಂಧನ
‘ಆರೋಪಿಗಳು ಮಂಗಳೂರಿನಲ್ಲಿ ತಲೆಮರೆಸಿ ಕೊಂಡು ಓಡಾಡುತ್ತಿದ್ದರು. ಆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಬಾಗಲಗುಂಟೆ ಪೊಲೀಸರು, ಆರೋಪಿಗಳನ್ನು ಬಂಧಿಸಲು ಮಂಗಳೂರಿಗೆ ಹೋಗಿದ್ದರು’ ಎಂದು ಅಧಿಕಾರಿ ವಿವರಿಸಿದರು.

‘ಪೊಲೀಸರನ್ನು ನೋಡಿದ್ದ ಆರೋಪಿಗಳು, ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡಿದ್ದ ಪೊಲೀಸರು ಅವರ ಕಾರನ್ನು ಅಡ್ಡಗಟ್ಟಿದ್ದರು. ನಂತರವೇ ಬಂಧಿಸಿ ನಗರಕ್ಕೆ ಕರೆತಂದಿದ್ದರು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.