ಬೆಂಗಳೂರು: ಕೃಷಿ ಬೆಳೆಗಳಿಗೆ ತಗುಲಿದ್ದ ರೋಗ ನಿವಾರಿಸಲು ಔಷಧಿ ಸಿಂಪಡಣೆಗೆ ನೆರವಾಗಿದ್ದ ಡ್ರೋನ್, ಈಗ ಗಡಿಪ್ರದೇಶದಲ್ಲಿ ದೇಶ ಕಾಯುತ್ತಿರುವ ಯೋಧರಿಗೂ ಅಗತ್ಯ ವಸ್ತುಗಳನ್ನು ಪೂರೈಸಲು ಕಾರ್ಗೊ ರೂಪದಲ್ಲಿ
ಆವಿಷ್ಕಾರಗೊಂಡಿದೆ. ಅದು ಏರೋ ಇಂಡಿಯಾ 2023ರಲ್ಲಿ ರಕ್ಷಣಾ ಕ್ಷೇತ್ರದ ಗಮನ ಸೆಳೆಯುತ್ತಿದೆ.
ಎತ್ತರದ ಬೆಟ್ಟದ ತುದಿಮುಟ್ಟುವ ಸಾಮರ್ಥ್ಯದ ಡ್ರೋನ್, ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾಕ್ಕೂ ಬಂದಿದೆ.
ಈ ಡ್ರೋನ್ ಯೋಧರು ಕಾರ್ಯ ನಿರ್ವಹಿಸುವ ಸ್ಥಳಕ್ಕೆ ಆಹಾರ, ನೀರು ಸೇರಿದಂತೆ ಅಗತ್ಯ ಸಾಮಗ್ರಿ
ಗಳನ್ನು ಸುಲಭವಾಗಿ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳುತ್ತಾರೆ ಪ್ರದರ್ಶಕರು.
ವಿವಿಧ ರಾಜ್ಯಗಳು, ವಿದೇಶದ ಕಂಪನಿಗಳ ರಕ್ಷಣಾ ಸಾಮಗ್ರಿಗಳ ನಡುವೆ ಬೆಂಗಳೂರಿನ ಸ್ಕ್ಯಾನ್‌ಡ್ರೋನ್ ಕಂಪನಿ ಆವಿಷ್ಕರಿಸಿದ ಕಾರ್ಗೊ ಡ್ರೋನ್ ಪ್ರದರ್ಶನ ಮಳಿಗೆಯಲ್ಲಿದೆ. ಈ ಕಂಪನಿ ನಗರದ ವೈಟ್‌ಫೀಲ್ಡ್ ಬಳಿಯಿದ್ದು, ದೇಶದ ರಕ್ಷಣಾ ಇಲಾಖೆ ನಡೆಸಿದ ಬಿಡ್ಡಿಂಗ್‌ನಲ್ಲಿ ಡ್ರೋನ್ ಪೂರೈಸಲು ಆಯ್ಕೆಯಾಗಿದೆ. ಅಂತಿಮ ಹಂತದ ಒಡಂಬಡಿಕೆ ಬಾಕಿಯಿದೆ ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಂದು ಡ್ರೋನ್‌ಗೆ ₹ 1 ಕೋಟಿಗೂ ಹೆಚ್ಚು ಬೆಲೆಯಿದೆ. 50 ಕೆ.ಜಿ ಸಾಮರ್ಥ್ಯದ ಪದಾರ್ಥಗಳನ್ನು ಸುಲಭವಾಗಿ ಕೊಂಡೊಯ್ಯಲಿದೆ. ಬ್ಯಾಟರಿ ಆಧರಿಸಿ ಡ್ರೋನ್ ಚಲಿಸುತ್ತದೆ. ಒಮ್ಮೆ ರೀಚಾರ್ಜ್ ಮಾಡಿದರೆ, 30 ಕಿ.ಮೀನಷ್ಟು ದೂರ ಕ್ರಮಿಸಲಿದೆ’ ಎಂದು ಅವರು ಹೇಳುತ್ತಾರೆ.
‘ಗಡಿಯಲ್ಲಿ ಮಳೆ, ಚಳಿ, ಬಿಸಿಲನ್ನೂ ಲೆಕ್ಕಿಸದೆ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಡಿಭಾಗದಲ್ಲಿ ರಸ್ತೆ ಮಾರ್ಗವಿಲ್ಲದ ಕಾರಣಕ್ಕೆ ಆಹಾರ ಪೂರೈಕೆ ಈಗಲೂ ಕಷ್ಟವಾಗುತ್ತಿದೆ. ಈ ಸಂಕಷ್ಟ
ನಿವಾರಣೆ ಮಾಡಬೇಕು, ಯೋಧರಿಗೆ ಬಿಸಿಯಾದ ಆಹಾರ ತಕ್ಷಣವೇ ದೊರೆಯಬೇಕು ಎಂಬ ಉದ್ದೇಶದಿಂದ ಈ ಪುಟ್ಟ ಯಂತ್ರ ಆವಿಷ್ಕಾರ ಮಾಡಲಾಗಿದೆ. ರೈತರೂ ಕೃಷಿ ಪದಾರ್ಥಗಳ ಸಾಗಣೆಗೆ ಈ ಡ್ರೋನ್ ಬಳಕೆ ಮಾಡಿ
ಕೊಳ್ಳಬಹುದು’ ಎಂದು ಆಪರೇಟರ್ ಪುನೀತ್ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.