ಬೆಂಗಳೂರು: ಪೂರ್ವ ಬೆಂಗಳೂರಿನ ಟೆಕ್ ಕಾರಿಡಾರ್‌ನಲ್ಲಿ ವರ್ತೂರು–ಸರ್ಜಾಪುರ ಮುಖ್ಯರಸ್ತೆಗಳನ್ನು ಸಂಪರ್ಕಿಸುವ ಕಾರ್ಮೆಲರಾಮ್-ಗುಂಜೂರು ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ನೈರುತ್ಯ ರೈಲ್ವೆ ಆರಂಭಿಸಿದೆ.
ವಾಹನದಟ್ಟಣೆಯಿಂದ ನಿತ್ಯ ಗಿಜಿಗುಟ್ಟುವ ಈ ರಸ್ತೆಯು ರೈಲ್ವೆ ಹಳಿ ದಾಟಿ ಹೋಗಬೇಕು. ಹಲವು ರೈಲುಗಳು ಇಲ್ಲಿ ಸಂಚರಿಸುವುದರಿಂದ ವಾಹನಗಳು ಕಾಯುವುದು ಅನಿವಾರ್ಯವಾಗಿತ್ತು. ಇದನ್ನು ತಪ್ಪಿಸಲು ಮೇಲ್ಸೇತುವೆ ನಿರ್ಮಿಸಬೇಕು ಎಂದು ಸ್ಥಳೀಯರು ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರು. ಇದೀಗ ಅದಕ್ಕೆ ಸ್ಪಂದನೆ ಸಿಕ್ಕಿದೆ. 280 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲ ಇರುವ ದ್ವಿಪಥ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ.
2025ರ ಏಪ್ರಿಲ್‌ವರೆಗೆ ಕಾಮಗಾರಿ ಅವಧಿ: ಕಾರ್ಮೆಲರಾಮ್-ಗುಂಜೂರು ಜಂಕ್ಷನ್‌ನಲ್ಲಿ ₹ 30 ಕೋಟಿ ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. 2025ರ ಏಪ್ರಿಲ್ ಒಳಗೆ ಕಾಮಗಾರಿ ಮುಗಿಯಲಿದೆ ಎಂದು ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ನೈರುತ್ಯ ರೈಲ್ವೆ ಕಾಮಗಾರಿ ನಿರ್ವಹಣೆ ಮಾಡಿದರೆ, ಸಂಚಾರ ಪೊಲೀಸರು ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಿದೆ. ಗುಂಜೂರು ಭಾಗದಲ್ಲಿ ಸೌತ್ ಇಂಡಿಯನ್ ಬ್ಯಾಂಕ್ ಬಳಿಯಿಂದ ಕಾಮಗಾರಿ ಆರಂಭಗೊಂಡಿದೆ.
ರಸ್ತೆ ಬದಲಾವಣೆ: ವರ್ತೂರು ರಸ್ತೆಯಿಂದ ಸರ್ಜಾಪುರ ರಸ್ತೆ ಕಡೆಗೆ ಹೋಗುವ ವಾಹನಗಳು ಕಾರ್ಮೆಲರಾಮ್ 100 ಅಡಿ ರಸ್ತೆ ಕಡೆಗೆ ಸಾಗಬೇಕು. ಸರ್ಜಾಪುರ ರಸ್ತೆಯಿಂದ ವರ್ತೂರು ಕಡೆಗೆ ಹೋಗುವ ವಾಹನಗಳು ಕಾರ್ಮೆಲರಾಮ್ 100 ಅಡಿ ರಸ್ತೆ, ಗುಂಜೂರು ರಸ್ತೆ ಮೂಲಕ ಹೋಗಬೇಕು. ಕಾಮಗಾರಿಗಾಗಿ ರಸ್ತೆಯನ್ನು ಮುಚ್ಚಲಾಗಿದ್ದು, ಪರ್ಯಾಯ ರಸ್ತೆಗಳ ಬಗ್ಗೆ ಸೂಚನಾ ಫಲಕ ಅಳವಡಿಸಲಾಗಿದೆ. ಇದನ್ನು ನೋಡಿಕೊಂಡು ವಾಹನಗಳನ್ನು ಚಾಲಕರು ಚಲಾಯಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ರೈಲು ಬಂದಾಗಲೆಲ್ಲ ನಾವು ಹಳಿ ದಾಟಲು ಕಾಯಬೇಕಿತ್ತು. ಎರಡೂ ಕಡೆಯೂ ದೀರ್ಘವಾದ ವಾಹನಗಳ ಸಾಲು ಇರುತ್ತಿತ್ತು. ಮೇಲ್ಸೇತುವೆ ನಿರ್ಮಾಣಗೊಂಡರೆ ತಡೆಯಿಲ್ಲದೇ ಸಾಗಬಹುದು. ಕಾಮಗಾರಿಯಿಂದಾಗಿ ಎರಡು ವರ್ಷ ತೊಂದರೆಯಾದರೂ ಪರವಾಗಿಲ್ಲ, ಕಾಯುವುದಕ್ಕೆ ಮುಕ್ತಿ ಸಿಗಬೇಕು’ ಎಂದು ಸ್ಥಳೀಯ ನಿವಾಸಿ ಶಿವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಹುನಿರೀಕ್ಷಿತ ಮೇಲ್ಸೇತುವೆ ಕಾಮಗಾರಿಗಾಗಿ ಕಾರ್ಮೆಲರಾಮ್ ರೈಲ್ವೆ ಕ್ರಾಸಿಂಗ್ ಸಂಚಾರವನ್ನು ಮುಚ್ಚಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಬೇಕು.-ಮಂಜುಳಾ ಅರವಿಂದ ಲಿಂಬಾವಳಿ ಶಾಸಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.