ಬೆಂಗಳೂರು: ತಮ್ಮ ಕೌಟುಂಬಿಕ ವಿಚಾರವಾಗಿ ಪದೇ ಪದೇ ಗಲಾಟೆ ಮಾಡಿಕೊಳ್ಳುತ್ತಿರುವ ನಟ ದುನಿಯಾ ವಿಜಯ್ ಹಾಗೂ ಅವರ ಮೊದಲ ಪತ್ನಿ ನಾಗರತ್ನ ಕುಟುಂಬದ ವಿರುದ್ಧ ಗರಂ ಆಗಿರುವ ಪೊಲೀಸರು, ಅವರಿಬ್ಬರ ವಿರುದ್ಧವೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
‘ತಂದೆ ವಿಜಯ್ ಹಾಗೂ ಅವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ಮಗಳು ಮೋನಿಕಾ, ಗಿರಿನಗರ ಠಾಣೆಗೆ ಇತ್ತೀಚೆಗಷ್ಟೇ ದೂರು ನೀಡಿದ್ದರು. ದುನಿಯಾ ವಿಜಯ್ ಸಹ ಪ್ರತಿ–ದೂರು ಕೊಟ್ಟಿದ್ದರು. ಅಷ್ಟಾದರೂ ಎರಡೂ ಕುಟುಂಬಗಳ ನಡುವೆ ಜಗಳ ಮುಂದುವರಿದಿತ್ತು.
‘ನಟ ವಿಜಯ್ ಹಾಗೂ ಅವರ ಕುಟುಂಬದವರು, ಬೇರೆಯವರಿಗೆ ಮಾದರಿ ಆಗಿರಬೇಕು. ಪದೇ ಪದೇ ಬೀದಿಗೆ ಬಂದು ಗಲಾಟೆ ಮಾಡುತ್ತಿದ್ದಾರೆ. ಠಾಣೆಗೂ ಬಂದು ದೂರಿನ ಮೇಲೆ ದೂರು ನೀಡುತ್ತಿದ್ದಾರೆ. ಅದರಿಂದ ಪೊಲೀಸರ ಸಮಯವೂ ವ್ಯರ್ಥವಾಗುತ್ತಿದೆ. ಅಕ್ಕ–ಪಕ್ಕದ ನಿವಾಸಿಗಳಿಗೂ ಕಿರಿಕಿರಿ ಉಂಟು ಮಾಡಿ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ, ಅವರಿಬ್ಬರ ಕುಟುಂಬದವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಸಿಆರ್‌ಪಿಸಿ ಸೆಕ್ಷನ್ 107ರಡಿ ಎಫ್‌ಐಆರ್ ಸಹ ದಾಖಲಿಸಿಕೊಳ್ಳಲಾಗಿದೆ. ಎರಡೂ ಕುಟುಂಬದವರಿಗೆ ಸದ್ಯದಲ್ಲೇ ನೋಟಿಸ್ ಕೊಡಲಿದ್ದೇವೆ. ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಲಿದ್ದೇವೆ. ನಂತರ, ಡಿಸಿಪಿ ಎದುರು ಹಾಜರುಪಡಿಸಿ ಎಚ್ಚರಿಕೆ ನೀಡಿ ಕಳುಹಿಸಲಿದ್ದೇವೆ’ ಎಂದರು.
‘ದೂರು–ಪ್ರತಿ ದೂರು ಕೊಟ್ಟಿರುವ ವಿಜಯ್ ಕುಟುಂಬದ ಎಲ್ಲರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಈಗ ಅವರಿಗೆಲ್ಲ ಕಡೆಯ ಎಚ್ಚರಿಕೆ ನೀಡಲಿದ್ದೇವೆ. ಪುನಃ ಗಲಾಟೆ ಮಾಡಿಕೊಂಡರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.