ಬೆಂಗಳೂರು: ಸಾರ್ವಜನಿಕ ವಲಯದ ವಿಮಾ ಕಂಪನಿಗಳ ಪ್ರತಿನಿಧಿಗಳು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ವೈದ್ಯಕೀಯ ಸೇವೆ ವಿಚಾರವಾಗಿ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಒಕ್ಕೂಟದ (ಫಾನಾ) ಜತೆಗೆ ಸಭೆ ನಡೆಸಿದ್ದು, ಮಾತುಕತೆ ಫಲಪ್ರದವಾಗಿದೆ.
2014ರಲ್ಲಿ ಜನರಲ್ ಇನ್ಶುರೆನ್ಸ್ ಪಬ್ಲಿಕ್ ಸೆಕ್ಟರ್ ಅಸೋಸಿಯೇಷನ್ (ಜಿಪ್ಸಾ)ಜತೆಗೆ ಫಾನಾ ವಿಮಾ ಸೇವೆ ವಿಚಾರವಾಗಿ ಒಪ್ಪಂದ ಮಾಡಿ ಕೊಂಡಿತ್ತು. ಜಿಪ್ಸಾದಡಿ ಯುನೈಟೆಡ್ ಇಂಡಿಯಾ, ಓರಿಯಂಟಲ್ ಇನ್ಶುರೆನ್ಸ್, ನ್ಯಾಷನಲ್ ಇನ್ಶುರೆನ್ಸ್ ಹಾಗೂ ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಮಂದಿ ಆರೋಗ್ಯ ವಿಮೆಯ ಪ್ರಯೋಜನ ಪಡೆಯುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುತ್ತಿರುವ ಸಾರ್ವಜನಿಕ ವಲಯದ ವಿಮಾ ಕಂಪನಿಗಳು ಒಪ್ಪಂದದ ಪ್ರಕಾರ ಹಣವನ್ನು ಪಾವತಿಸುತ್ತಿಲ್ಲ. ಇದರಿಂದಾಗಿ ಚಿಕಿತ್ಸಾ ವೆಚ್ಚದ ಒಟ್ಟು ಮೊತ್ತದಲ್ಲಿ ಶೇ 40ರಷ್ಟು ವ್ಯತ್ಯಯ ಉಂಟಾಗುತ್ತಿರುವುದಾಗಿ ಫಾನಾಆರೋಪಿಸಿತ್ತು. ಜಿಪ್ಸಾ ಜತೆಗಿನ ಸಹಭಾಗಿತ್ವ ಕಡಿದುಕೊಳ್ಳುವ ಮೂಲಕ ಜೂನ್ 1ರಿಂದ ಕ್ಯಾಷ್‌ಲೆಸ್ ಸೌಲಭ್ಯವನ್ನು ನಿಲ್ಲಿಸುವುದಾಗಿ ಘೋಷಿಸಿತ್ತು.
‘ಸಾರ್ವಜನಿಕ ವಲಯದ ನಾಲ್ಕು ವಿಮಾ ಕಂಪನಿ ಪ್ರತಿನಿಧಿಗಳು ಸಭೆಗೆ ಬಂದಿದ್ದರು. ಈ ಹಿಂದಿನ ಒಪ್ಪಂದದ ಅನುಸಾರ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿಹಳೆ ಒಪ್ಪಂದ ಕೈಬಿಟ್ಟು, ಸದ್ಯ ರೋಗಿಗಳಿಗೆ ನಿಗದಿಪಡಿಸಿದ ಚಿಕಿತ್ಸಾ ಮೊತ್ತವನ್ನೇ ನೀಡುವಂತೆ ಸೂಚಿಸಿದ್ದೇವೆ. ಇದಕ್ಕೆ ವಿಮಾ ಕಂಪನಿಗಳು ಕೂಡ ಸಮ್ಮತಿ ಸೂಚಿಸಿವೆ. ನೂತನ ಒಪ್ಪಂದವನ್ನು ಜಿಪ್ಸಾ ಲಿಖಿತ ರೂಪದಲ್ಲಿ ನೀಡಿದ ಬಳಿಕ ಜೂನ್ 1ರಿಂದ ನಗದು ರಹಿತ ವೈದ್ಯಕೀಯ ಸೇವೆ ತೀರ್ಮಾನವನ್ನು ಹಿಂಪಡೆಯುತ್ತೇವೆ’ ಎಂದು ಫಾನಾ ಅಧ್ಯಕ್ಷ ಡಾ.ಆರ್.ರವೀಂದ್ರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.