ಬೆಂಗಳೂರು: ‘ಕುರುಬ ಸಮುದಾಯದ ಹೆಸರಿನಲ್ಲಿ ಮಂತ್ರಿಗಳಾಗಿ ಅಧಿಕಾರ ಅನುಭವಿಸುವ ಜನಪ್ರತಿನಿಧಿಗಳು ವೈಯಕ್ತಿಕ ಹಿತಾಸಕ್ತಿಯ ಹಿಂದೆ ಬೀಳುತ್ತಿದ್ದಾರೆ. ಇದರಿಂದಾಗಿ ಸಮುದಾಯದ ಏಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ಕಾಗಿನೆಲೆ ಮಹಾಸಂಸ್ಥಾನದ (ಕಲಬುರ್ಗಿ ವಿಭಾಗ) ಸಿದ್ದರಾಮಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ನಡೆದ ಅಹಲ್ಯಾಬಾಯಿ ಹೋಳ್ಕರ್ ಪತ್ತಿನ ಮಹಿಳಾ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಅಧಿಕಾರ ಪಡೆಯುವ ವೇಳೆ ಸಮುದಾಯದ ಶಕ್ತಿ ಪ್ರದರ್ಶಿಸುವ ಜನಪ್ರತಿನಿಧಿಗಳು ಬಳಿಕ ತಾವು ಬಂದ ಹಾದಿಯನ್ನು ಮರೆತುಬಿಡುತ್ತಾರೆ. ಸಿದ್ದರಾಮಯ್ಯ, ಎಚ್.ಎಂ.ರೇವಣ್ಣ, ಎಚ್. ವಿಶ್ವನಾಥ್ ನಮ್ಮದೇ ಸಮುದಾಯದವರಾಗಿದ್ದರೂ ಪರಸ್ಪರ ಹೊಂದಾಣಿಕೆ ಕೊರತೆ ಕಾಣುತ್ತಿದೆ. ಹೀಗಾದರೆ ಸಮುದಾಯ ಅನಾಥವಾಗುತ್ತದೆ’ ಎಂದರು.
‘ರಾಜಕಾರಣಿಗಳು ಸೂಚಿಸಿದವರಿಗೆ ಸಾಲ ನೀಡಲು ಆರಂಭಿಸಿದರೆ ಬ್ಯಾಂಕ್ ಯಶಸ್ಸು ಕಾಣುವುದಿಲ್ಲ. ಸಾಲ ನೀಡುವಾಗ ಎಚ್ಚರದಿಂದ ಇರಬೇಕಾಗುತ್ತದೆ. ಸಹಕಾರ ಸಂಘದ ದುರ್ಬಳಕೆಗೆ ಅವಕಾಶ ನೀಡಬಾರದು’ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಮಹಿಳೆಯರು ಪುರುಷರಿಗಿಂತ ಪ್ರಾಮಾಣಿಕವಾಗಿ ಹಣಕಾಸು ವ್ಯವಹಾರ ನಿಭಾಯಿಸುತ್ತಾರೆ. ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆ ಆರಂಭಿಸಲು ಬ್ಯಾಂಕ್ ನೆರವಾಗಬೇಕು. ಹೆಣ್ಣು ಮಕ್ಕಳು ಸ್ವಾವಲಂಬಿಗಳಾದರೆ ಸಹಜವಾಗಿಯೇ ಸಮಾಜ ನೋಡುವ ದೃಷ್ಟಿ ಬದಲಾಗುತ್ತದೆ’ ಎಂದರು.
ಬೀದರ್ ಜಿ.ಪಂ. ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಆಂಧ್ರಪ್ರದೇಶದ ಕುರುಬ ಹಣಕಾಸು ನಿಗಮದ ಮಾಜಿ ಅಧ್ಯಕ್ಷೆ ಎಸ್. ಸವಿತಾ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಬೆಂಗಳೂರು ಡಯಾಬಿಟಿಕ್ ಸೆಂಟರ್‌ನ ನಿರ್ದೇಶಕಿ ಡಾ. ವಿಜಯಲಕ್ಷ್ಮೀ ಪರಮೇಶ್, ಬಿಬಿಎಂಪಿ ಸದಸ್ಯೆ ಪಲ್ಲವಿ ಚನ್ನಪ್ಪ, ಆಂಧ್ರಪ್ರದೇಶದ ಕಲ್ಯಾಣದುರ್ಗದ ಶಾಸಕಿ ಕೆ.ವಿ. ಉಷಾ ಶ್ರೀಚರಣ್ ಮತ್ತು ಬಾಗಲಕೋಟೆ ಜಿ.ಪಂ. ಅಧ್ಯಕ್ಷೆ ಗಂಗೂಬಾಯಿ ಮೇಟಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮುಖ್ಯ ಪ್ರವರ್ತಕಿ ಕೆ.ಆರ್. ಪ್ರಭಾವತಿ, ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಕಾರ್ಯಕ್ರಮದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.