ಬೆಂಗಳೂರು: ಜಾತಿ ಸಮೀಕ್ಷೆಯ ವರದಿ ವಿರೋಧಿಸುವವರು ತಮ್ಮದೇ ಜಾತಿಯ ಬಡವರನ್ನು ವಿರೋಧಿಸುತ್ತಿದ್ದಾರೆ ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ತಿಳಿಸಿದರು.
ಒಬಿಸಿ ಫೆಡರೇಶನ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ದಕ್ಷಿಣ ಭಾರತ ಹಿಂದುಳಿದ ವರ್ಗಗಳ ಮುಖಂಡರ ಸಮಾವೇಶ, ಮಂಡಲ್ ವರದಿ, ಡಿ. ದೇವರಾಜ ಅರಸು ಸ್ಮರಣೋತ್ಸವ, ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಮೀಕ್ಷೆಯು ಹಿಂದುಳಿದ ವರ್ಗಕ್ಕೆ ಸೀಮಿತವಾಗಿ ನಡೆದಿಲ್ಲ. ಎಲ್ಲ ಜಾತಿ ಸಮುದಾಯಗಳ ಸಮೀಕ್ಷೆ ಮಾಡಲಾಗಿದೆ. ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸಮುದಾಯದಲ್ಲಿ ಇರುವ ಬಡವರ ಮಾಹಿತಿಯೂ ಅದರಲ್ಲಿದೆ. ಈ ವರದಿಯನ್ನು ವಿರೋಧಿಸುವ ಮೂಲಕ ಭೂರಹಿತ ಒಕ್ಕಲಿಗರು, ಭೂರಹಿತ ಲಿಂಗಾಯತರನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
ಮೀಸಲಾತಿ ಎಂದರೆ ಪ್ರಾತಿನಿಧ್ಯ. ದಲಿತರ ನೋವು ಕಾಣುತ್ತದೆ. ಆದರೆ, ಹಿಂದುಳಿದವರ ಯಾತನೆ ಕಾಣುವುದಿಲ್ಲ. ದಲಿತರಿಗೆ ರಾಜಕೀಯ ಪ್ರಾತಿನಿಧ್ಯವನ್ನು ನೀಡಿರುವುದು ಸ್ವಾಗತಾರ್ಹ. ಅದೇ ರೀತಿ ಹಿಂದುಳಿದ ವರ್ಗಗಳಿಗೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.
ಬಾಯಿಪಾಠ ಮಾಡಿ ಪರೀಕ್ಷೆ ಬರೆದು ಉತ್ತಮ ಅಂಕಗಳಿಸುವುದನ್ನೇ ಬುದ್ಧಿವಂತಿಕೆ ಎಂದು ತಿಳಿದು ಶ್ರಮ ಆಧಾರಿತ ಬುದ್ಧಿವಂತಿಕೆಯನ್ನು ನಿರಾಕರಿಸಲಾಗಿದೆ. ಕುಶಲಕರ್ಮಿಗಳಾಗಿರುವ ಹಿಂದುಳಿದವರು ಈ ಕಾರಣದಿಂದ ಹಿಂದೆ ಉಳಿದಿದ್ದಾರೆ. ಅವರು ಹಿಂದೆ ಉಳಿದಿದ್ದಲ್ಲ, ಹಿಂದಕ್ಕೆ ತಳ್ಳಿರುವುದು ಎಂದು ವಿವರಿಸಿದರು.
‘ಸಾಮಾಜಿಕ ನ್ಯಾಯ’ದ ಬಗ್ಗೆ ಮಾಜಿ ಉಪಮೇಯರ್ ಬಿ.ಪಿ. ಹರೀಶ್ ಮಾತನಾಡಿ, ‘ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ 56ರಷ್ಟಿದೆದೆ. ಇದಕ್ಕೆ ಅನುಗುಣವಾಗಿ ಶಾಸಕರು ಸುಮಾರು 120 ಇರಬೇಕಿತ್ತು. ಆದರೆ, 25 ರಿಂದ 30 ಇದ್ದಾರೆ. ಮೇಲ್ಜಾತಿಗಳಲ್ಲಿ ಇರುವ ಒಗ್ಗಟ್ಟು ನಮ್ಮಲ್ಲಿ ಇಲ್ಲದೇ ಇರುವುದೇ ಇದಕ್ಕೆ ಕಾರಣ’ ಎಂದು ಹೇಳಿದರು.
ಬಿ.ಪಿ. ಮಂಡಲ್ ಅವರ ಮೊಮ್ಮಗ ಸೂರಜ್ ಯಾದವ್ ಮಂಡಲ್, ಮಾಜಿ ಸಂಸದ ಕಮಲ್ ಕಿಶೋರ್ ಕಮಾಂಡೊ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಶಿಕ್ಷಣ ತಜ್ಞ ಉಮೇಶ್ ಬಾಬು, ‘ಸಮರ್ಥನಂ’ ಟ್ರಸ್ಟಿ ಜಿ.ಕೆ. ಮಹಾಂತೇಶ್, ಉದ್ಯಮಿ ಬಂಜಾರಪಾಳ್ಯ ಮಂಜುನಾಥ್, ಮಾಜಿ ಮೇಯರ್ ವೆಂಕಟೇಶ್ ಮೂರ್ತಿ, ಮುಖಂಡರಾದ ಕೇಶವ ಪ್ರಸಾದ್, ಸುಜಾತಾ ಮಯೂರಿ, ಮುದುಮಡು ರಂಗಸ್ವಾಮಿ, ಪುಟ್ಟಸ್ವಾಮಿ, ಶ್ರೀನಿವಾಸಾಚಾರಿ ಭಾಗವಹಿಸಿದ್ದರು.
‘ಶೇ 50 ಅನುದಾನ ಒದಗಿಸಿ’
‘ಬಜೆಟ್‌ನಲ್ಲಿ ಶೇ 50ರಷ್ಟು ಅನುದಾನವನ್ನು ಶೇ 56ರಷ್ಟಿರುವ ಹಿಂದುಳಿದ ವರ್ಗಗಳಿಗೆ ಮೀಸಲಿಡಬೇಕು. ಕಾಂತರಾಜು ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಹಿಂದುಳಿದವರಿಗೆ ಇರುವ ಮೀಸಲಾತಿಯನ್ನು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಶೈಕ್ಷಣಿಕ ಆರ್ಥಿಕ ರಾಜಕೀಯವಾಗಿ ಅನುಷ್ಠಾನಗೊಳಿಸಬೇಕು. ದೇಶದ ಸಂಪನ್ಮೂಲವನ್ನು ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಸಮಾನವಾಗಿ ಹಂಚಬೇಕು’ ಎಂದು ಒಬಿಸಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಜೆ. ಎಂಜೇರಪ್ಪ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.