ADVERTISEMENT

ಶಾಮನೂರು ಹೇಳಿಕೆ ಖಂಡನೀಯ: ನಾವೋ ನೀವೋ ನೋಡಿಯೇ ಬಿಡೋಣ: ಹಿಂದುಳಿದ ಜಾತಿಗಳ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 15:49 IST
Last Updated 4 ಮಾರ್ಚ್ 2024, 15:49 IST
<div class="paragraphs"><p>ಶಾಮನೂರು ಶಿವಶಂಕರಪ್ಪ</p></div>

ಶಾಮನೂರು ಶಿವಶಂಕರಪ್ಪ

   

ಬೆಂಗಳೂರು: ‘ಕಸದ ಬುಟ್ಟಿಯಲ್ಲಿ ಬಿದ್ದಿದ್ದ, ಹತ್ತು ವರ್ಷಗಳಷ್ಟು ಹಳೆಯದಾದ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿ ಜಾರಿಗೊಳಿಸಿದರೆ ಮೂರು ಸಮುದಾಯಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ‘ ಎಂಬ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಖಂಡಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ‘ರಾಜ್ಯದಲ್ಲಿ ಆ ಮೂರು ಜಾತಿಗಳ ಜನಸಂಖ್ಯೆ ಶೇ 30ರಷ್ಟಿದೆ. ಆದರೆ, ಹಿಂದುಳಿದ ವರ್ಗಗಳ ಸಮುದಾಯಗಳ ಜನಸಂಖ್ಯೆ ಶೇ 70ರಷ್ಟಿದೆ. ಅವರು ಹೋರಾಡುವುದಾದರೆ, ನಾವೂ ಬೀದಿಗಿಳಿದು ಹೋರಾಟ ಮಾಡುತ್ತೇವೆ. ನೀವೋ, ನಾವೋ ನೋಡಿಯೇ ಬಿಡೋಣ’ ಎಂದು ಸವಾಲು ಹಾಕಿದರು.

ADVERTISEMENT

‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿವಾರು ಜನಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿಯನ್ನು ಸದನದಲ್ಲಿ ಮಂಡಿಸಬೇಕು. ಸಾರ್ವಜನಿಕ ಚರ್ಚೆಗೊಳಪಡಿಸಬೇಕು. ಅದರಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿ, ನಂತರ ವರದಿಯಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ’ ಎಂಬ ಎಚ್ಚರಿಕೆ ನೀಡಿದರು.

ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್, ‘ಶಾಮನೂರು ಶಿವಶಂಕರಪ್ಪ ಅವರು ಸರ್ಕಾರ ನಡೆಸಿದ್ದ ಸಮೀಕ್ಷಾ ವರದಿಯನ್ನು ಕಸದ ಬುಟ್ಟಿಯಲ್ಲಿ ಬಿದ್ದಿದ್ದ ವರದಿ ಎಂದು ಹೇಳಿರುವುದು ಖಂಡನೀಯ. ಅದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದಲ್ಲ. ವರದಿಯ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಅವರು ತಳ ಮತ್ತು ಶೋಷಿತ ಸಮುದಾಯಗಳನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿದರು.

‘ಬಸವತತ್ವಗಳು ಮತ್ತು ಶರಣರಲ್ಲಿ ನಂಬಿಕೆ ಇದ್ದವರು ಈ ಸಮೀಕ್ಷಾ ವರದಿಯನ್ನು ಗೌರವದಿಂದ ಸ್ವಾಗತಿಸುತ್ತಿದ್ದರು. ವರದಿಯನ್ನು ಸಾರ್ವಜನಿಕ ಚರ್ಚೆಗೊಳಪಡಿಸಿದ ನಂತರ ಇದರಲ್ಲಿ ಏನಾದರೂ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸಿ ಅನುಷ್ಠಾನಗೊಳಿಸುವಂತೆ ಸಲಹೆ ನೀಡಬೇಕು’ ಎಂದು ಹೇಳಿದರು.

ಸಂಚಾಲಕ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.