ADVERTISEMENT

ಆನ್‌ಲೈನ್‌ ಖರೀದಿ: ಹಸು ನೀಡುವುದಾಗಿ ₹35 ಸಾವಿರ ಪಂಗನಾಮ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 19:30 IST
Last Updated 1 ನವೆಂಬರ್ 2018, 19:30 IST

ಬೆಂಗಳೂರು: ಹಸು ಮಾರಾಟ ಮಾಡುವುದಾಗಿ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದ ಅಪರಿಚಿತರು, ನಗರದ ನಿವಾಸಿ ಪ್ರವೀಣ್ ಕುಲಕರ್ಣಿ ಎಂಬುವರಿಂದ ₹35 ಸಾವಿರ ಪಡೆದುಕೊಂಡು ವಂಚಿಸಿದ್ದಾರೆ.

ಆ ಸಂಬಂಧ ಪ್ರವೀಣ್, ನಗರದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು, ‘ಸನ್‌ ಎಂಟರ್‌ಪ್ರೈಸಸ್‌’ ಕಂಪನಿ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

’ವಿಜಯನಗರದ ನಿವಾಸಿ ಪ್ರವೀಣ್, ಹಸು ಕೊಂಡುಕೊಳ್ಳಲೆಂದು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದರು. ಅವರಿಗೆ ಕರೆ ಮಾಡಿದ್ದ ಅಪರಿಚಿತ, ‘ನಾವು ಸನ್‌ ಎಂಟರ್‌ಪ್ರೈಸಸ್‌ ಕಂಪನಿಯವರು. ನಮ್ಮ ಕಂಪನಿ ಹಸುಗಳ ಫಾರಂ ನಡೆಸುತ್ತಿದೆ. ಇದಕ್ಕೆ ಸರ್ಕಾರದಿಂದ ಮಾನ್ಯತೆ ಇದೆ. ನಮ್ಮಲ್ಲಿ ಉತ್ತಮ ತಳಿಯ ಹಸುಗಳಿದ್ದು, ಕಡಿಮೆ ದರಕ್ಕೆ ಮಾರಾಟ ಮಾಡುತ್ತೇವೆ’ ಎಂದಿದ್ದ. ವಾಟ್ಸ್‌ಆ್ಯಪ್‌ನಲ್ಲೂ ಹಸುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಅಪರಿಚಿತನ ಮಾತು ನಂಬಿದ್ದ ಪ್ರವೀಣ್, ಆತ ಹೇಳಿದ್ದ ಎಸ್‌ಬಿಐ ಬ್ಯಾಂಕ್‌ ಶಾಖೆಯ ಖಾತೆಗೆ ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ₹35 ಸಾವಿರ ಜಮಾ ಮಾಡಿದ್ದರು. ಅದಾದ ನಂತರ ಆರೋಪಿ, ಮೊಬೈಲ್ ಸ್ವಿಚ್ಡ್ ಆಫ್‌ ಮಾಡಿದ್ದಾನೆ’ ಎಂದರು.

‘ಜಾನುವಾರುಗಳ ಮಾರಾಟದ ಬಗ್ಗೆ ಕೆಲವು ಜಾಲತಾಣಗಳಲ್ಲಿ ಜಾಹೀರಾತು ಪ್ರಕಟಿಸುತ್ತಿರುವ ಖದೀಮರು, ತಮ್ಮನ್ನು ಸಂಪರ್ಕಿಸುವವರಿಂದ ಹಣ ಪಡೆದುಕೊಂಡು ವಂಚಿಸುತ್ತಿರುವುದು ಗೊತ್ತಾಗಿದೆ. ಜಾಲತಾಣಗಳ ಮೂಲಕ ಆರೋಪಿಗಳ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.