ಬೆಂಗಳೂರು: ‘ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬಾರದು’ ಎಂದು ಆಗ್ರಹಿಸಿ ಕಾವೇರಿ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸೆ. 26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಜತೆ, 50ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
‘ಕಾವೇರಿ ನದಿ ನಮ್ಮ ಜನ್ಮ ಸಿದ್ಧ ಹಕ್ಕು’ ಘೋಷವಾಕ್ಯದೊಂದಿಗೆ ಬಂದ್‌ಗೆ ಕರೆ ನೀಡಿರುವ ಸಮಿತಿ ಪದಾಧಿಕಾರಿಗಳು, ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಮ್ ಆದ್ಮಿ ಪಕ್ಷ, ಬಿಬಿಎಂಪಿ ಕಾರ್ಮಿಕರ ಸಂಘ, ಖಾಸಗಿ ವಾಹನ ಮಾಲೀಕರ ಒಕ್ಕೂಟ, ಖಾಸಗಿ ಶಾಲೆಗಳ ಪೋಷಕರ ಒಕ್ಕೂಟ, ಎಪಿಎಂಸಿ ಈರುಳ್ಳಿ–ಆಲೂಗಡ್ಡೆ ವರ್ತಕರ ಸಂಘ, ಬೆಳ್ಳುಳ್ಳಿ ವರ್ತಕರ ಸಂಘ, ಚಿಕ್ಕಪೇಟೆ ವರ್ತಕರ ಒಕ್ಕೂಟ, ಬಿಡಿಎ ನೌಕರರ ಒಕ್ಕೂಟ, ಬೆಂಗಳೂರು ವಕೀಲರ ಸಂಘ, ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ಭಾರತ ಕಮ್ಯುನಿಸ್ಟ್ ಪಕ್ಷ, ಕರ್ನಾಟಕ ನವ ನಿರ್ಮಾಣ ಸೇನೆ ಸೇರಿದಂತೆ 50ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತ ಸೋಮವಾರ ಸಂಚರಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಬಂದ್ ಕರಪತ್ರಗಳನ್ನು ಹಂಚಿದರು. ಕಾವೇರಿ ನದಿ ನೀರಿಗಾಗಿ ಬಂದ್‌ನಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜನರನ್ನು ಕೋರಿದರು.
ಬಂದ್‌ಗೆ ಬೆಂಬಲ ನೀಡಿರುವ ಖಾಸಗಿ ವಾಹನಗಳ ಒಕ್ಕೂಟ, ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಪುರಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಹೇಳಿದೆ.
‘ಪ್ರತಿಭಟನಾ ಮೆರವಣಿಗೆಯಲ್ಲಿ ಆಟೊ ಚಾಲಕರು ಹಾಗೂ ಮಾಲೀಕರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಆಟೊಗಳ ಸೇವೆ ಇರುವುದಿಲ್ಲ’ ಎಂದು ಪೀಸ್ ಆಟೊ ಒಕ್ಕೂಟದ ಅಧ್ಯಕ್ಷ ರಘು ತಿಳಿಸಿದ್ದಾರೆ.
ಕರವೇ ಪ್ರತ್ಯೇಕ: ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣಗೌಡ ಬಣದಿಂದ ಮಂಗಳವಾರ ಬೆಳಿಗ್ಗೆ ಪ್ರತ್ಯೇಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಗಾಂಧಿನಗರದಲ್ಲಿರುವ ಸಂಘಟನೆಯ ಕಚೇರಿಯಿಂದ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಕರವೇ ತಿಳಿಸಿದೆ.
‘ಕಾವೇರಿ ನದಿ ವಿಚಾರವಾಗಿ ನಮ್ಮ ಹೋರಾಟ ನಿರಂತರ. ಜನರಲ್ಲಿ ಜಾಗೃತಿ ಮೂಡಿಸುವುದು ಮೊದಲ ಆದ್ಯತೆ. ಬಂದ್ ಮಾಡಿ ಜನಸಾಮಾನ್ಯರಿಗೆ ತೊಂದರೆ ನೀಡುವ ಉದ್ದೇಶ ನಮಗಿಲ್ಲ. ಬಂದ್ ಎಂಬುದು ಹೋರಾಟದ ಕೊನೆಯ ಅಸ್ತ್ರ. ಹೀಗಾಗಿ, ಯಾವುದೇ ಬಂದ್‌ಗೆ ನಮ್ಮ ಬೆಂಬಲವಿಲ್ಲ’ ಎಂದು ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
ಮೆಟ್ರೊ, ಕ್ಯಾಬ್ ಓಡಾಟ ಯಥಾಪ್ರಕಾರ: ನಮ್ಮ ಮೆಟ್ರೊ ಹಾಗೂ ಓಲಾ–ಉಬರ್ ಸೇರಿದಂತೆ ಇತರೆ ಕ್ಯಾಬ್‌ಗಳು ಯಥಾಪ್ರಕಾರ ಸಂಚರಿಸಲಿವೆ. ಸೆ. 26ರಂದು ಕರೆ ನೀಡಿರುವ ಬಂದ್‌ಗೆ ಕ್ಯಾಬ್ ಚಾಲಕರು ಹಾಗೂ ಮಾಲೀಕರ ಒಕ್ಕೂಟ ಬೆಂಬಲ ನೀಡಿಲ್ಲ. ಹೀಗಾಗಿ, ನಗರದಲ್ಲಿ ಕ್ಯಾಬ್‌ಗಳ ಸಂಚಾರವಿರಲಿದೆ.
ಬೀದಿಬದಿ ವ್ಯಾಪಾರಿಗಳಿಂದ ನೈತಿಕ ಬೆಂಬಲ: ‘ಸೆ. 26ರ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಲಾಗುತ್ತಿದೆ. ಬೀದಿಬದಿ ವ್ಯಾಪಾರ–ವಹಿವಾಟು ಯಥಾಪ್ರಕಾರ ಇರಲಿದೆ’ ಎಂದು ರಾಜ್ಯ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಇ. ರಂಗಸ್ವಾಮಿ ತಿಳಿಸಿದ್ದಾರೆ.
‘ರಾಜ್ಯದ ರೈತರು ಹಾಗೂ ಜೀವ–ಜಲದ ಹಿತದೃಷ್ಟಿಯಿಂದ ಕಾವೇರಿ ನದಿ ನೀರು ವಿಚಾರದ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪತ್ರಿಕೆ ವಿತರಣೆ ಮಾಡಲಿದ್ದೇವೆ’ ಎಂದು ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗಮ್ ಸುರೇಶ್ ತಿಳಿಸಿದ್ದಾರೆ.
ಏನಿರುತ್ತೆ?
ಆಸ್ಪತ್ರೆಗಳು
ಔಷಧಿ ಮಳಿಗೆಗಳು
ಆಂಬುಲೆನ್ಸ್ ಸಂಚಾರ
ಬ್ಯಾಂಕ್‌ಗಳು
ದಿನಪತ್ರಿಕೆಗಳು
ಮೆಟ್ರೊ, ರೈಲು
ಏನಿರಲ್ಲ?
ಆಟೊ
ಮ್ಯಾಕ್ಸಿ ಕ್ಯಾಬ್
ಖಾಸಗಿ ಬಸ್‌ಗಳು
ಖಾಸಗಿ ಹಾಗೂ ಸರ್ಕಾರಿ ಶಾಲೆಗಳು
ಶಾಲಾ ವಾಹನಗಳು
ಚಿಕ್ಕಪೇಟೆ ಹಾಗೂ ಸುತ್ತಮುತ್ತ ಮಾರುಕಟ್ಟೆ
ಕೆಲ ಖಾಸಗಿ ಶಾಲೆಗಳು
ಗೂಡ್ಸ್ ಸಾಗಣೆ ವಾಹನಗಳು
ಕೈಗಾರಿಕೆಗಳು
ಆಭರಣ ಮಳಿಗೆಗಳು
ಅನುಮಾನ
ಓಲಾ–ಉಬರ್ ಕ್ಯಾಬ್
ಬಿಎಂಟಿಸಿ ಬಸ್
ಸರ್ಕಾರಿ ಕಚೇರಿಗಳು
ಐಟಿ–ಬಿಟಿ ಕಂಪನಿಗಳು
ಸಿನಿಮಾ ಮಂದಿರಗಳು
ಹೋಟೆಲ್‌ಗಳು
ಬೆಂಗಳೂರು ಶಾಲೆ– ಕಾಲೇಜುಗಳಿಗೆ ರಜೆ
ಬೆಂಗಳೂರು: ಸೆ. 26ರಂದು ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದ ಶಾಲೆ–ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ‘ಮಕ್ಕಳ ರಕ್ಷಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ’ ಎಂದಿದ್ದಾರೆ.
ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬಂದ್ ದಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸುವುದಾಗಿ ಹೇಳಿಕೆ ನೀಡಿವೆ. ಮಂಗಳವಾರ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯಗಳು ಸಹ ತಮ್ಮ ವ್ಯಾಪ್ತಿಯ ಕಾಲೇಜುಗಳಿಗೆ ರಜೆ ನೀಡಿದ್ದು, ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿವೆ.
ಸೆ. 29ರಂದು ಕರ್ನಾಟಕ ಬಂದ್
ಸೆ. 26ರಂದು ಬೆಂಗಳೂರು ಬಂದ್ ಬೆನ್ನಲ್ಲೇ ಸೆ. 29ರಂದು ಕರ್ನಾಟಕ ಬಂದ್‌ಗೂ ಕರೆ ನೀಡಲಾಗಿದ್ದು, ಅಂದು ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಕನ್ನಡ ಸಂಘಟನೆಗಳ ಒಕ್ಕೂಟ ಬಂದ್‌ಗೆ ಕರೆ ನೀಡಿದೆ. ಕಾವೇರಿ ಜನ ಸಂರಕ್ಷಣಾ ಸಮಿತಿ ಕರೆ ನೀಡಿರುವ ಮಂಗಳವಾರದ ಬಂದ್‌ಗೆ ಬೆಂಬಲ ನೀಡದ ಹಲವು ಸಂಘಟನೆಗಳು, ಸೆ. 29ರ ಬಂದ್‌ಗೆ ಬೆಂಬಲ ಸೂಚಿಸಿವೆ.
‘ಕಾವೇರಿ ನದಿ ವಿಚಾರ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಇದು ರಾಜ್ಯದ ಹಕ್ಕು. ಜೊತೆಗೆ, ಮಹದಾಯಿ ಯೋಜನೆ, ಕೃಷ್ಣಾ ನದಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟದ ಅಗತ್ಯವಿದೆ. ಹೀಗಾಗಿ, ಕರ್ನಾಟಕ ಬಂದ್ ಮಾಡಲಾಗುತ್ತಿದೆ. ಹಲವು ಸಂಘಟನೆಗಳು ಈಗಾಗಲೇ ಬೆಂಬಲ ನೀಡಿವೆ. ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು’ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.
ಸಂಘಟನೆಗಳಲ್ಲಿ ಒಡಕು: ಕಾವೇರಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟದ ವಿಚಾರದಲ್ಲಿ ಸಂಘಟನೆಗಳ ನಡುವೆ ಒಡಕು ಮೂಡಿದೆ.
ಕೆಲ ಸಂಘಟನೆಗಳು, ಮಂಗಳವಾರ ಬಂದ್ ನಡೆಸುತ್ತಿವೆ. ಇದಕ್ಕೆ ಬೆಂಬಲ ಸೂಚಿಸದ ಸಂಘಟನೆಗಳು, ಸೆ. 29ರಂದು ಬಂದ್ ಮಾಡುವುದಾಗಿ ಹೇಳುತ್ತಿವೆ. ಇದರಿಂದಾಗಿ ಜನರಲ್ಲಿ ಗೊಂದಲ ಮೂಡಿದೆ. ದಿನದ ದುಡಿಮೆ ನಂಬಿಕೊಂಡಿರುವ ಜನ, ‘ಎರಡು ಬಂದ್ ಬೇಕಿತ್ತಾ’ ಎಂದು ಪ್ರಶ್ನಿಸುತ್ತಿದ್ದಾರೆ.
‘ಮಾಲೀಕರು ಹಾಗೂ ಚಾಲಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಎರಡು ದಿನ ಬಂದ್ ಮಾಡಿದರೆ, ಮತ್ತಷ್ಟು ಕಷ್ಟ ಎದುರಿಸಲಿದ್ದಾರೆ. ಹೀಗಾಗಿ 29ರ ಬಂದ್‌ಗೆ ಮಾತ್ರ ಬೆಂಬಲ’ ಎಂದು ಓಲಾ–ಉಬರ್ ಚಾಲಕರು ಹಾಗೂ ಮಾಲೀಕರ ಒಕ್ಕೂಟದ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.
ಬಂದ್‌ಗಿಲ್ಲ ಅವಕಾಶ, ನಿಷೇಧಾಜ್ಞೆ ಜಾರಿ
‘ಹೈಕೋರ್ಟ್ ಆದೇಶದನ್ವಯ ನಗರದಲ್ಲಿ ಪ್ರತಿಭಟನೆ ಹಾಗೂ ಬಂದ್‌ಗಳಿಗೆ ಅವಕಾಶವಿಲ್ಲ. ಸೆ. 26ರಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಗಳವಾರ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಜನರು ಗುಂಪು ಸೇರುವುದು ಕಾನೂನು ಬಾಹಿರ. ಒತ್ತಾಯದಿಂದ ಬಂದ್ ಮಾಡಲು ಪ್ರಯತ್ನಿಸಿದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದರು.
‘ಕೆಎಸ್‌ಆರ್‌ಪಿಯ 60 ತುಕಡಿ, ಸಿಎಆರ್‌ನ 40 ತುಕಡಿ ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು, ಡಿಸಿಪಿಗಳು, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು ಭದ್ರತೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ’ ಎಂದು ಹೇಳಿದರು.
‘ತಮಿಳುನಾಡಿನಿಂದ ನಗರಕ್ಕೆ ಬರುವ ಬಸ್‌ಗಳಿಗೆ ಭದ್ರತೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಯಾವುದಾದರೂ ತುರ್ತು ಸಂದರ್ಭದಲ್ಲಿ ಸಹಾಯ ಬೇಕಾದರೆ ಹಾಗೂ ಬಂದ್‌ಗೆ ಯಾರಾದರೂ ಒತ್ತಾಯಪಡಿಸಿದರೆ 112ಕ್ಕೆ ಕರೆ ಮಾಡಬಹುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.